ಎಚ್.ಡಿ.ಕೋಟೆ: ಕೇರಳದ ವೈನಾಡು ಪ್ರದೇಶ ಹಾಗೂ ತಾಲೂಕಿನಾದ್ಯಂತ ಅಬ್ಬರಿಸಿದ ಆಶ್ಲೇಷಾ ಮಳೆಗೆ ತಾಲೂಕಿನ ಎಲ್ಲಾ ಜಲಾಶಯಗಳು, ಕೆರೆ, ಕಟ್ಟೆಗಳು ಉಕ್ಕಿ ಹರಿದ ಪರಿಣಾಮ 100 ಕೋಟಿ ರೂ.ಮೌಲ್ಯಕ್ಕೂ ಅಧಿಕ ನಷ್ಟ ಸಂಭವಿಸಿದೆ. ಕಬಿನಿ ಜಲಾಶಯ ಭರ್ತಿಯಾಗಿ 1.50 ಲಕ್ಷ ಕ್ಯೂಸೆಕ್‌ಗೂ ಆಧಿಕ ನೀರು ಹೊರ ಬಿಟ್ಟ ಪರಿಣಾಮ ನೂರಾರು ರೈತರ ಹೊಲ ಗದ್ದೆಗಳು, ನದಿ ಪಾತ್ರ ಕುಟುಂಬಗಳ ಮನೆಗಳು ನೀರು ಪಾಲಾಗಿದ್ದು, ಸಹಸ್ರಾರು ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೆಚ್ಚಿದ ಮಳೆ ಹಾಗೂ ಕಪಿಲಾ ಮತ್ತು ತಾರಕ ನದಿಗಳು ಉಕ್ಕಿ ಹರಿದ ಪರಿಣಾಮ ಆಪಾರ ಆಸ್ತಿ, ಬೆಳೆ ನಷ್ಟದ ಜೊತೆಗೆ ಹತ್ತಾರು ಗ್ರಾಮಗಳಿಗೆ ಸಂಪರ್ಕ ಬೆಸೆಯುವ ಸೇತುವೆಗಳು, ಪ್ರಮುಖ ರಸ್ತೆಗಳು ಜನರ ಬಳಕೆಗೆ ಇನ್ನೂ ಮುಕ್ತವಾಗಿಲ್ಲ. ಕೆಲವು ರಸ್ತೆ ಹಾಗೂ ಸೇತುವೆಗಳು ಕೊಚ್ಚಿ ಹೋಗಿದ್ದು, ಅವುಗಳ ದುರಸ್ತಿ ಕೂಡ ಶೀಘ್ರ ಆಗಬೇಕಿದೆ.
ಶಾಸಕರ ಅಭಯ, ಸಂಸದರ ಸುಳಿವಿಲ್ಲ: ಕ್ಷೇತ್ರದ ಶಾಸಕ ಅನಿಲ್ ಚಿಕ್ಕಮಾದು ತಾಲೂಕು ಕೇಂದ್ರದಲ್ಲೇ ಉಳಿದು ಮಳೆಯಿಂದ ಹಾಗೂ ಜಲಾಶಯದಿಂದ ಉಕ್ಕಿ ಹರಿದ ನೀರಿನಿಂದ ಹಾನಿಗೊಳಗಾಗಿರುವ ಸ್ಥಳಗಳಿಗೆ ತೆರಳಿ ಸಂತ್ರಸ್ತರಿಗೆ ಧೈರ್ಯ ತುಂಬಿ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಅದರೆ, ಕ್ಷೇತ್ರದ ಸಂಸದರಾದ ವಿ.ಶ್ರೀನಿವಾಸ್‌ಪ್ರಸಾದ್ ಇದಕ್ಕೂ ನಮಗೂ ಸಂಬಂಧವಿಲ್ಲ ಎಂಬಂತೆ ತಾಲೂಕಿನ ಕಡೆ ಪ್ರಯಾಣ ಬೆಳೆಸದೆ ತಟಸ್ಥರಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಜೊತೆಗೆ ತಾಲೂಕಿಗೆ ಚುನಾವಣೆ ಸಂದರ್ಭದಲ್ಲಿ ಒಬ್ಬರ ಹಿಂದೆ ಒಬ್ಬರಂತೆ ಪೈಪೋಟಿಗೆ ಬಿದ್ದವರಂತೆ ಬರುವ ಇನ್ನುಳಿದ ಜನನಾಯಕರೂ ಎಲ್ಲಿದ್ದಾರೆ ಎಂಬುದೇ ತಿಳಿಯುತ್ತಿಲ್ಲ. ಇನ್ನೂ ತಾಲೂಕಿನ ಮಾಜಿ ಶಾಸಕರು, ಹಾಲಿ ಮತ್ತು ಮಾಜಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಅಧ್ಯಕ್ಷರೂ, ಸದಸ್ಯರೂ ಎಲ್ಲಿ ಹೋದರು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ತಾಲೂಕಿನಲ್ಲಿ ಉಂಟಾಗಿರುವ ನೆರೆ ನಷ್ಟವನ್ನು ಪರಿಶೀಲಿಸಿ ಸಂತ್ರಸ್ತರಿಗೆ ತ್ವರಿತಗತಿಯಲ್ಲಿ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.