Advertisement

ಬಿಡಿಎಗೆ 100 ಕೋಟಿ ನಷ್ಟ: ಕೇಸು ದಾಖಲು

01:13 PM Jul 03, 2022 | Team Udayavani |

ಬೆಂಗಳೂರು: ಬಿಡಿಎ ಸ್ವಾಧೀನಪಡಿಸಿಕೊಂಡ ಜಾಗಕ್ಕೆ ಕಾನೂನು ಬಾಹಿರವಾಗಿ ಬದಲಿ ಜಾಗವನ್ನು ಪಡೆದು ಮಾರಾಟ ಮಾಡಿ ಪ್ರಾಧಿಕಾರಕ್ಕೆ ಸುಮಾರು 100 ಕೋಟಿ ರೂ. ನಷ್ಟ ಉಂಟು ಮಾಡಿರುವ ನಾಗರಾಜ್‌ ಎಂಬ ವ್ಯಕ್ತಿ ಮತ್ತು ಇದಕ್ಕೆ ಕಾರಣರಾದ ಬಿಡಿಎ ಅಧಿಕಾರಿಗಳ ವಿರುದ್ಧ ಬಿಎಂಟಿಎಫ್‌ನಲ್ಲಿ ಎಫ್‌ಐಆರ್‌ ದಾಖಲಾಗಿದೆ.

Advertisement

ಈಸ್ಟ್‌ ಆಫ್‌ ಎನ್‌ ಜಿಇಎಫ್‌ ಬಡಾವಣೆ ನಿರ್ಮಾಣಕ್ಕಾಗಿ ಬಿಡಿಎ ಈರಣ್ಣ ಎಂಬುವರಿಗೆ ಸೇರಿದ ಬೆಂಗಳೂರು ಪೂರ್ವ ತಾಲೂಕಿನ ಕೆ.ಆರ್‌ .ಪುರ ಹೋಬಳಿಯ ಬಾಣಸವಾಡಿ ಗ್ರಾಮದ 4 ಎಕರೆ 13 ಗುಂಟೆ ಜಮೀನನ್ನು 1986 ರಲ್ಲಿ ಸ್ವಾಧೀನ ಪಡಿಸಿಕೊಂಡಿದ್ದ ಬಿಡಿಎ ಇದಕ್ಕೆ ಪರಿಹಾರ ದ ಹಣವನ್ನು ಸಿವಿಲ್‌ ಕೋರ್ಟಿನಲ್ಲಿ ಠೇವಣಿ ಇಟ್ಟಿತ್ತು. ಆದರೆ, ಈರಣ್ಣ ಬಳಿ ನಾಗರಾಜ್‌ ಎಂಬ ವ್ಯಕ್ತಿ ಜಿಪಿಎ ಬರೆಯಿಸಿಕೊಂಡು ಜಮೀನು ತನ್ನದು ಎಂದು ಪ್ರತಿಪಾದಿಸಿ, ನಿವೇಶನಗಳನ್ನು ನಿರ್ಮಾಣ ಮಾಡಿ ಮಾರಾಟ ಮಾಡಿದ್ದರು.

ಈ ಮಧ್ಯೆ, ರೆವಿನ್ಯೂ ನಿವೇಶನದಾರರ ಮೂಲಕ ಬಿಡಿಎ ತಮ್ಮ ನಿವೇಶನಗಳನ್ನು ಭೂಸ್ವಾಧೀನಪಡಿಸಿಕೊಂಡಿದ್ದು, ಇದಕ್ಕೆ ಬದಲಿ ನಿವೇಶನಗಳನ್ನು ನೀಡುವಂತೆ ಸೂಚನೆ ನೀಡಬೇಕೆಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.  ಈ ಅರ್ಜಿಗಳ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಬಿಡಿಎ ನಿಯಮಾನುಸಾರ ನಿರ್ಧಾರ ಕ್ಕೆ ಸೂಚಿಸಿ ಅರ್ಜಿ ವಿಲೇವಾರಿ ಮಾಡಿತ್ತು.

ಬಿಡಿಎಗೆ ಅರ್ಜಿ: ಏತನ್ಮಧ್ಯೆ, ನಾಗರಾಜ್‌ ಎಲ್ಲಾ ರೆವಿನ್ಯೂ ನಿವೇಶನದಾರರಿಂದ ನಿವೇಶನಗಳನ್ನು ತನ್ನ ಹೆಸರಿಗೆ ಬರೆಸಿಕೊಂಡು, ತನಗೆ ಬದಲಿ ನಿವೇಶನಗಳನ್ನು ಮಂಜೂರು ಮಾಡುವಂತೆ ಬಿಡಿಎಗೆ ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಎರಡು ಬಾರಿ ಚರ್ಚಿಸಿದ್ದ ಬಿಡಿಎ ಪ್ರಾಧಿಕಾರ ಸಭೆಯು ನಿಯಮಾವಳಿಗಳ ಪ್ರಕಾರ ಬದಲಿ ನಿವೇಶನ ನೀಡಲು ಸಾಧ್ಯವಿಲ್ಲ ಎಂದು ನಾಗರಾಜ್‌ ಮನವಿಯನ್ನು ತಿರಸ್ಕರಿಸಿತ್ತು. 2012ರಲ್ಲಿ ನಡೆದ ಪ್ರಾಧಿಕಾರದ ಸಭೆಯಲ್ಲಿ ನಾಗರಾಜ್‌ ಗೆ ಅರ್ಕಾವತಿ ಬಡಾವಣೆಯ ವಿವಿಧ ಸರ್ವೇ ನಂಬರ್‌ಗಳಲ್ಲಿ ಒಟ್ಟು 4 ಎಕರೆ 13 ಗುಂಟೆ ಜಮೀನನ್ನು ಬದಲಿಯಾಗಿ ನೀಡಲು ನಿರ್ಧರಿಸಿ ಮಂಜೂರು ಮಾಡಲಾಗಿದೆ.

ಹೀಗೆ ಮಂಜೂರು ಮಾಡಲಾದ ಕೆಲವು ಜಾಗಗಳು ಬಫರ್‌ ಝೋನ್‌ ಸೇರಿದಂತೆ ಇನ್ನಿತರೆ ಕಾರಣಗಳಿಂದ ಮನೆ ನಿರ್ಮಾಣಕ್ಕೆ ಅಸಾಧ್ಯ ಎಂಬ ನೆಪ ಹೇಳಿ ನಾಗರಾಜ್‌ ನನಗೆ ಬೇರೆ ಕಡೆ ಭೂಮಿ ನೀಡಬೇಕೆಂದು ಮತ್ತೂಮ್ಮೆ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಮನವಿಯನ್ನು ಪುರಸ್ಕರಿಸಿದ್ದ ಬಿಡಿಎ ಅಧಿಕಾರಿಗಳು 2014ರಲ್ಲಿ ಥಣಿಸಂದ್ರ ಸೇರಿದಂತೆ ವಿವಿಧೆಡೆಗಳಲ್ಲಿ ಜಿಪಿಎದಾರನಾಗಿದ್ದ ನಾಗರಾಜ್‌ ಹೆಸರಿಗೆ ಮಂಜೂರು ಮಾಡಿ, ನೋಂದಣಿಯನ್ನೂ ಮಾಡಿಸಿ ಸ್ವಾಧೀನಪತ್ರಗಳನ್ನೂ ನೀಡಿರುತ್ತಾರೆ ಎಂದು ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಕ್ರಮದ ಸಂಬಂಧ ತನಿಖೆ ನಡೆಸುವಂತೆ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರು ಬಿಡಿಎ ಕಾರ್ಯಪಡೆಯ ಡಿವೈಎಸ್‌ಪಿ ರವಿಕುಮಾರ್‌ ತಂಡಕ್ಕೆ ಆದೇಶ ನೀಡಿದ್ದರು. ಜತೆಗೆ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದ್ದರು.

Advertisement

ತನಿಖೆಗೆ ಬಿಡಿಎ ಅಧ್ಯಕ್ಷ ವಿಶ್ವನಾಥ್‌ ಆದೇಶ : ಇದೊಂದು ದೊಡ್ಡ ಮಟ್ಟದ ಅಕ್ರಮವಾಗಿದೆ ಎಂಬುದನ್ನು ಗಮನಿಸಿದ ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ಅವರು, ಭೂಮಂಜೂರಾತಿಯ ಇಡೀ ಕಡತವನ್ನು ಜಾಲಾಡಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ವರದಿ ನೀಡುವಂತೆ ಬಿಡಿಎ ಕಾರ್ಯಪಡೆಯ ಡಿವೈಎಸ್‌ ಪಿ ರವಿಕುಮಾರ್‌ ತಂಡಕ್ಕೆ ಆದೇಶ ನೀಡಿದ್ದರು. ಆ ಹಿನ್ನೆಲೆಯಲ್ಲಿಯೇ ಪ್ರಕರಣದ ವಿಚಾರಣೆ ನಡೆಸಿದ್ದ ಡಿವೈಎಸ್‌ಪಿ ರವಿಕುಮಾರ್‌ ಮತ್ತು ಇನ್ಸ್‌ ಪೆಕ್ಟರ್‌ ಅವರು ಈ ಪ್ರಕರಣದಲ್ಲಿ ಭಾರೀ ಪ್ರಮಾಣದ ಅಕ್ರಮ ನಡೆದಿದೆ ಎಂದು ಆಯುಕ್ತರು ಮತ್ತು ಅಧ್ಯಕ್ಷರಿಗೆ ವರದಿ ನೀಡಿದ್ದರು.

ಆರೋಪಿತರ ವಿರುದ್ಧ ಬಿಎಂಟಿಎಫ್‌ಗೆ ಇನ್ಸ್‌ ಪೆಕ್ಟರ್‌ ದೂರು : ಬಿಡಿಎನಲ್ಲಿ ನಡೆದಿರುವ ಸುಮಾರು 100 ಕೋಟಿ ರೂ. ಹಗರಣದ ವಿರುದ್ಧ ಬಿಎಂಟಿಎಫ್‌ ನಲ್ಲಿ ಎಫ್‌ಐಆರ್‌ ದಾಖಲು ಮಾಡಲು ಬಿಡಿಎ ಆಯುಕ್ತರು ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರು. ಆ ಹಿನ್ನೆಲೆಯಲ್ಲಿ ಬಿಡಿಎ ಇನ್ಸ್‌ಪೆಕ್ಟರ್‌ ಶ್ರೀನಿವಾಸ್‌ ಅವರು ಪ್ರಾಧಿಕಾರಕ್ಕೆ ನಷ್ಟ ಮಾಡಿರುವ ನಾಗರಾಜ್‌ ಮತ್ತು ಇದಕ್ಕೆ ಕಾರಣರಾಗಿರುವ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಬಿಎಂಟಿಎಫ್‌ಗೆ ದೂರು ನೀಡಿದ್ದರು. ಈ ದೂರಿನನ್ವಯ ಬಿಎಂಟಿಸಿ ಇನ್ಸ್‌ ಪೆಕ್ಟರ್‌ ಬೇಬಿ ಬೇಬಿ ವಾಲಿಕರ್‌ ಅವರು ಎಫ್‌ಐಆರ್‌ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next