Advertisement

100 ಕೋಟಿ ಡೋಸ್‌ ದಾಖಲೆ: ಹೊಸ ಮೈಲಿಗಲ್ಲು; ದೇಶಾದ್ಯಂತ ಸಂಭ್ರಮ

04:49 PM Oct 22, 2021 | Team Udayavani |

ಕೇವಲ 9 ತಿಂಗಳ ಅವಧಿಯಲ್ಲಿ ಭಾರತವು 100 ಕೋಟಿ ಡೋಸ್‌ ಲಸಿಕೆಯ ಮೈಲಿಗಲ್ಲು ಸಾಧಿಸಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. ಗುರುವಾರ ಲಸಿಕೆಯು “ಶತಕ’ ದಾಖಲಿಸುತ್ತಲೇ ಈ ಸಾಧನೆಯ ಹಿಂದೆ ಶ್ರಮವಹಿಸಿ ದುಡಿದ ವಿಜ್ಞಾನಿಗಳು, ಆರೋಗ್ಯ ಸಿಬಂದಿ, ಮುಂಚೂಣಿ ಕಾರ್ಯಕರ್ತರು, ವೈದ್ಯರ ಮೊಗದಲ್ಲಿ ಸಂತೃಪ್ತಿಯ ನಗು ಕಾಣಿಸಿದೆ. ಜಾಗತಿಕ ನಾಯಕರೂ ಭಾರತೀಯರಿಗೆ ಹಾಗೂ ಭಾರತ ಸರಕಾರಕ್ಕೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

Advertisement

ಪಾರಂಪರಿಕ ತಾಣಗಳಲ್ಲಿ  ತ್ರಿವರ್ಣ ಬೆಳಕಿನ ಚಿತ್ತಾರ :

100 ಕೋಟಿ ಡೋಸ್‌ಗಳ ಸಾಧನೆ ಹಿನ್ನೆಲೆಯಲ್ಲಿ ಭಾರತೀಯ ಪುರಾತತ್ವ ಇಲಾಖೆಯಡಿ ಬರುವ ಕರ್ನಾಟಕದ ಹಂಪಿ ಸೇರಿದಂತೆ ದೇಶದ 100 ಪಾರಂಪರಿಕ ತಾಣಗಳಲ್ಲಿ ಗುರುವಾರ ರಾತ್ರಿ ತ್ರಿವರ್ಣ ಧ್ವಜದ ಬಣ್ಣಗಳ ದೀಪಾಲಂಕಾರ ಮಾಡಲಾಗಿತ್ತು. ಕೆಂಪುಕೋಟೆ, ಕುತುಬ್‌ ಮಿನಾರ್‌, ಹುಮಾಯೂನ್‌ ಸಮಾಧಿ, ತುಘಲಕಾಬಾದ್‌ ಕೋಟೆ, ಪುರಾನಾ ಖೀಲಾ, ಫ‌ತೇಪುರ ಸಿಕ್ರಿ ಆಗ್ರಾ, ರಾಮಪ್ಪ ದೇವಾಲಯ, ಹಂಪಿ, ಧೋಲಾವಿರ, ಲೇಹ್‌ ಅರಮನೆ ಸೇರಿದಂತೆ 100 ಸ್ಮಾರಕಗಳಲ್ಲಿ “ಬೆಳಕಿನ ಚಿತ್ತಾರ’ ಮೂಡಿತು.

ಹಾಡು-ಸಾಕ್ಷ್ಯಚಿತ್ರ ಬಿಡುಗಡೆ :

ಭಾರತದ ಲಸಿಕೆ ಅಭಿಯಾನದ ಹಿಂದಿನ ಪರಿಶ್ರಮವನ್ನು ಪ್ರತಿಬಿಂಬಿಸುವ ಹಾಡು ಮತ್ತು ಸಾಕ್ಷ್ಯಚಿತ್ರವೊಂದನ್ನು ಗುರುವಾರ ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್‌ಮಾಂಡವಿಯಾ ಬಿಡುಗಡೆ ಮಾಡಿದ್ದಾರೆ. ದೇಶದ ಅತೀ ದೊಡ್ಡ, 1,400 ಕೆ.ಜಿ. ತೂಕದ ಖಾದಿ ತ್ರಿವರ್ಣಧ್ವಜವನ್ನು ಪ್ರದರ್ಶನಕ್ಕಿಡಲಾದ ದಿಲ್ಲಿಯ ಕೆಂಪುಕೋಟೆಯಲ್ಲಿ ಈ ಕಾರ್ಯಕ್ರಮ ನಡೆದಿದೆ. ಈ ವೇಳೆ ಮಾತನಾಡಿದ ಸಚಿವರು, “ಇಂದು ಭಾರತವು ಇತಿಹಾಸ ನಿರ್ಮಿಸಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪ. 100 ಕೋಟಿ ಡೋಸ್‌ ಲಸಿಕೆಯು ಆತ್ಮನಿರ್ಭರ ಭಾರತದ ಕಥೆ ಹೇಳಿದೆ’ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದ ಹಾಡನ್ನು ಖ್ಯಾತ ಗಾಯಕ ಕೈಲಾಶ್‌ ಖೇರ್‌ ಹಾಡಿದ್ದಾರೆ.

Advertisement

ಅಭಿನಂದನೆಗಳ ಮಹಾಪೂರ :

ಭಾರತವು 100 ಕೋಟಿ ಡೋಸ್‌ಗಳ ಮೈಲಿಗಲ್ಲುÉ ಸಾಧಿಸುತ್ತಿದ್ದಂತೆ ದೇಶ-ವಿದೇಶಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಡ್ರೋಸ್‌ ಘೆಬ್ರೆಯೇಸಸ್‌ ಅವರು ಪ್ರಧಾನಿ ನರೇಂದ್ರ ಮೋದಿ, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು ಹಾಗೂ ಭಾರತದ ಜನರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಟ್ವೀಟ್‌ ಮಾಡಿರುವ ಅವರು, “ಕೊರೊನಾ ಸೋಂಕಿನಿಂದ ಜನರನ್ನು ರಕ್ಷಿಸುವ ಮತ್ತು ಲಸಿಕೆ ಸಮಾನತೆಯ ಗುರಿ ಸಾಧಿಸುವಲ್ಲಿ ನಿಮ್ಮ ಪ್ರಯತ್ನಕ್ಕೆ ಅಭಿನಂದನೆಗಳು’ ಎಂದು ಹೇಳಿದ್ದಾರೆ. ಭೂತಾನ್‌ ಪ್ರಧಾನಿ ಡಾ| ಲೋಟೆ ಶೆರಿಂಗ್‌, ಶ್ರೀಲಂಕಾ ಪ್ರಧಾನಿ ಮಹೀಂದಾ ರಾಜಪಕ್ಸೆ ಸೇರಿದಂತೆ ಹಲವು ದೇಶಗಳ ನಾಯಕರು ಕೂಡ ಭಾರತವನ್ನು ಅಭಿನಂದಿಸಿದ್ದಾರೆ.

ಮೇಡ್‌ ಇನ್‌ ಇಂಡಿಯಾ ಲಸಿಕೆಗಳ ಸಾಧನೆ :

“ದೇಶವು 100 ಕೋಟಿ ಡೋಸ್‌ಗಳ ಗಮನಾರ್ಹ ಸಾಧನೆ ಮಾಡುವಲ್ಲಿ ಭಾರತದಲ್ಲೇ ತಯಾರಾದ ಲಸಿಕೆಗಳ ಪಾತ್ರ ಮಹತ್ವದ್ದು’ ಎಂದು ಕೋವಿಡ್‌ ಕಾರ್ಯಪಡೆ ಅಧ್ಯಕ್ಷ, ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್‌ ಹೇಳಿದ್ದಾರೆ. ಇದೊಂದು ಅಸಾಮಾನ್ಯ ಸಾಧನೆಯಾಗಿದ್ದು, ಲಸಿಕೆ ವಿತರಣೆ ಅಭಿಯಾನ ಆರಂಭವಾದ ಕೇವಲ 9 ತಿಂಗಳಲ್ಲೇ ಈ ಗುರಿಯನ್ನು ತಲುಪಿದ್ದೇವೆ. ಇದೊಂದು ಐತಿಹಾಸಿಕ ಮೈಲುಗಲ್ಲು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಎಲ್ಲ ವಯಸ್ಕರಿಗೂ ಲಸಿಕೆ ವಿತರಣೆಯಾಗದ ಹೊರತು ದೇಶವು ಸಂಪೂರ್ಣವಾಗಿ ಸುರಕ್ಷಿತ ಎಂದು ಹೇಳಲಾಗದು ಎಂಬ ಎಚ್ಚರಿಕೆಯ ಮಾತುಗಳನ್ನೂ ಪೌಲ್‌ ಆಡಿದ್ದಾರೆ.

ಡೆಲ್ಟಾ ಸಾವು ತಡೆಯುವಲ್ಲಿ ಕೊವಿಶೀಲ್ಡ್‌ ಪರಿಣಾಮಕಾರಿ :

ಕೊರೊನಾದ ಡೆಲ್ಟಾ ರೂಪಾಂತರಿಯ ವಿರುದ್ಧ ಎರಡು ಡೋಸ್‌ ಕೊವಿಶೀಲ್ಡ್‌ ಮತ್ತು ಫೈಜರ್‌ ಲಸಿಕೆಯು ಶೇ.90ರಷ್ಟು ಪರಿಣಾಮಕಾರಿಯಾಗಿದೆ ಎಂದು ನ್ಯೂ ಇಂಗ್ಲೆಂಡ್‌ ಜರ್ನಲ್‌ ಆಫ್ ಮೆಡಿಸಿನ್‌ನಲ್ಲಿ ಪ್ರಕಟಿಸಲಾದ ಅಧ್ಯಯನ ವರದಿ ತಿಳಿಸಿದೆ. ಡೆಲ್ಟಾದಿಂದ ಸಾವು ಸಂಭವಿಸುವುದನ್ನು ತಡೆಯುವುದರಲ್ಲಿ ಈ ಎರಡೂ ಲಸಿಕೆಗಳು ಶೇ.90ರಷ್ಟು ಯಶಸ್ವಿಯಾಗಿವೆ ಎಂದು ವರದಿ ಹೇಳಿದೆ. ಸ್ಕಾಟ್ಲೆಂಡ್‌ನ‌ 54 ಲಕ್ಷ ಮಂದಿಯ ದತ್ತಾಂಶವನ್ನು ವಿಶ್ಲೇಷಿಸಿ ಈ ನಿರ್ಧಾರಕ್ಕೆ ಬರಲಾಗಿದೆ.

ತರೂರ್‌ ಮೆಚ್ಚುಗೆ; ಖೇರಾ ಟೀಕೆ :

ಈ ಎಲ್ಲ ಬೆಳವಣಿಗೆಗಳ ನಡುವೆಯೇ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ಅವರು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿ, “ಇದು ದೇಶದ ಎಲ್ಲರಿಗೂ ಹೆಮ್ಮೆ ತರುವ ವಿಚಾರ. 100 ಕೋಟಿ ಡೋಸ್‌ನ ಸಾಧನೆ ಮಾಡಿದ್ದರ ಕ್ರೆಡಿಟ್‌ ಸರಕಾರಕ್ಕೆ ಸಲ್ಲಬೇಕು’ ಎಂದು ಬರೆದುಕೊಂಡಿದ್ದಾರೆ. ಇದರಿಂದ ಕುಪಿತಗೊಂಡಿರುವ ಕಾಂಗ್ರೆಸ್‌ನ ಮತ್ತೂಬ್ಬ ನಾಯಕ ಪವನ್‌ ಖೇರಾ, “ಸರಕಾರಕ್ಕೆ ಕ್ರೆಡಿಟ್‌ ಕೊಡುವುದು, ಸೋಂಕಿನ ಸಮಯದಲ್ಲಿ ಸರಕಾರದ ನಿರ್ವಹಣೆಯ ಕೊರತೆಯಿಂದಾಗಿ ನೋವುಂಡ ಲಕ್ಷಾಂತರ ಕುಟುಂಬಗಳಿಗೆ ಮಾಡುವ ಅವಮಾನ’ ಎಂದು ಪ್ರತಿಕ್ರಿಯಿಸಿದ್ದಾರೆ.

ಆಚರಣೆಯ ಝಲಕ್‌ :

  • ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ದಿಲ್ಲಿ ಬಿಜೆಪಿಯಿಂದ ಸಮ್ಮಾನ, ಸಿಹಿ ವಿತರಣೆ
  • ಸ್ಪೈಸ್‌ ಜೆಟ್‌ ವಿಮಾನಗಳ ಹೊರಭಾಗದಲ್ಲಿ “ಪ್ರಧಾನಿ ಮೋದಿ, ಆರೋಗ್ಯ ಕಾರ್ಯಕರ್ತರಿರುವ ಚಿತ್ರ’ಗಳನ್ನು ಅಂಟಿಸಿ ಸಂಭ್ರಮಿಸಿದ ವಿಮಾನಯಾನ ಸಂಸ್ಥೆ
  • ದಿಲ್ಲಿಯ ಏಮ್ಸ್‌ ಆಸ್ಪತ್ರೆಯನ್ನು ಸಿಂಗರಿಸಿ, ರಂಗೋಲಿ ಹಾಕಿದ ಸಿಬಂದಿ. ಎಲ್ಲರಿಗೂ ಕೇಂದ್ರ ಆರೋಗ್ಯ ಇಲಾಖೆಯಿಂದ ಸಿಹಿ ವಿತರಣೆ
  • ದಿಲ್ಲಿ ಮೆಟ್ರೋದಲ್ಲಿ ರೈಲುಗಳ ಪ್ಯಾನೆಲ್‌ ಮತ್ತು ನಿಲ್ದಾಣಗಳ ಪರದೆಗಳಲ್ಲಿ 100 ಕೋಟಿಯ ದಾಖಲೆಯ ಮಾಹಿತಿ ಪ್ರದರ್ಶನ. ಪ್ರಯಾಣಿಕರಿಗೆ “ಸ್ಮರಣೀಯ ಸಾಧನೆ’ಯ ವಿವರಣೆ
  • ಬಿಲಾಸ್ಪುರ ರೈಲು ನಿಲ್ದಾಣದಲ್ಲಿ ಧ್ವನಿವರ್ಧಕಗಳ ಮೂಲಕ ದೇಶದ ನಾಗರಿಕರಿಗೆ ಅಭಿನಂದನೆ ಸಲ್ಲಿಕೆ
Advertisement

Udayavani is now on Telegram. Click here to join our channel and stay updated with the latest news.

Next