Advertisement

ಚೀನಕ್ಕೆ ದೇಶದ ಹಣ ಹರಿವು: ಆ್ಯಪ್‌ಗಳ ಮೂಲಕ ಈ ಅಕ್ರಮ: ಇ.ಡಿ. ಪ್ರತಿಪಾದನೆ

10:38 AM Sep 11, 2022 | Team Udayavani |

ಹೊಸದಿಲ್ಲಿ: ಕೆಲವು ಚೀನೀ ಪ್ರಜೆಗಳು ಅಕ್ರಮವಾಗಿ ಅನೇಕ ಭಾರತೀಯ ಕಂಪೆನಿಗಳನ್ನು ತೆರೆಯುತ್ತಿದ್ದಾರೆ. ಇವುಗಳ ಮೂಲಕ ಸಾವಿರಾರು ಕೋಟಿ ರೂಪಾಯಿ ಆದಾಯ ಸಂಗ್ರಹಿಸಿ ಚೀನಕ್ಕೆ ವರ್ಗಾವಣೆ ಮಾಡುತ್ತಿರುವ ಅಂಶ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳ ತನಿಖೆಯ ಮೂಲಕ ಬಹಿರಂಗವಾಗಿದೆ.

Advertisement

“ಮೊದಲಿಗೆ ಚಾರ್ಟರ್ಡ್‌ ಅಕೌಂಟೆಂಟ್‌ಗಳ ಸಹಾಯದಿಂದ ಡಮ್ಮಿ ಭಾರತೀಯ ನಿರ್ದೇಶಕರ ಹೆಸರಿನಲ್ಲಿ ಕಂಪೆನಿಯನ್ನು ಆರಂಭಿಸಲಾಗುತ್ತದೆ. ಸ್ವಲ್ಪ ಸಮಯದ ಅನಂತರ ಚೀನೀ ಪ್ರಜೆಗಳು ಭಾರತಕ್ಕೆ ಬಂದು ಈ ಕಂಪೆನಿಗಳ ನಿರ್ದೇಶಕ ಸ್ಥಾನವನ್ನು ವಹಿಸುತ್ತಾರೆ. ಅನಂತರ ಈ ಕಂಪೆನಿಗಳಿಂದ ಬಂದ ಆದಾಯವನ್ನು ಹಂತ- ಹಂತವಾಗಿ ಚೀನಕ್ಕೆ ವರ್ಗಾಯಿಸಲಾಗುತ್ತದೆ,’ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

“ಬಹುತೇಕ ಲೋನ್‌ ಆ್ಯಪ್‌, ಡೇಟಿಂಗ್‌ ಆ್ಯಪ್‌, ಬೆಟ್ಟಿಂಗ್‌ ಆ್ಯಪ್‌ಗಳ ಮೂಲ ಮಾಲಕತ್ವ ಚೀನೀ ಪ್ರಜೆಗಳದ್ದಾಗಿರುತ್ತದೆ. ಈ ರೀತಿಯ ನೂರಕ್ಕೂ ಹೆಚ್ಚು ಆ್ಯಪ್‌ಗಳು ಚೀನದಿಂದ ನಿರ್ವಹಣೆಯಾಗುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಅಲ್ಲದೇ ಕೇವಲ ಬೆಟ್ಟಿಂಗ್‌ ಆ್ಯಪ್‌ಗ್ಳೊಂದೇ 1,300 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದೆ’ ಎಂದು ವಿವರಿಸಿದರು.

ಬೆಟ್ಟಿಂಗ್‌ ಮತ್ತು ಡೇಟಿಂಗ್‌ ಆ್ಯಪ್‌ಗಳಿಂದ ಗಳಿಸಿದ ಆದಾಯವನ್ನು ಅಕ್ರಮವಾಗಿ ಚೀನಕ್ಕೆ ವರ್ಗಾಯಿಸುತ್ತಿರುವುದು ಪತ್ತೆಯಾಗಿದೆ ಎಂಬ ಅಂಶವೂ ತನಿಖೆಯಿಂದ ದೃಢಪಟ್ಟಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next