ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರ ಹತ್ಯೆಗೈಯ್ಯುವ ಉದ್ದೇಶದಿಂದ ಶ್ವೇತಭವನಕ್ಕೆ ಟ್ರಕ್ ಡಿಕ್ಕಿ ಹೊಡೆಸಿದ್ದ, ಭಾರತ ಮೂಲದ ಯುವಕ ಸಾಯಿ ವಸಿಷ್ಠ ಕುಂದುಲಾನನ್ನು ಮುಂದಿನವಾರದವರೆಗೆ ಪೊಲೀಸರ ವಶದಲ್ಲೇ ಇರಿಸಲು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ.
ವಾಷಿಂಗ್ಟನ್ ಪೊಲೀಸರು ಸಾಯಿಯನ್ನು ಬಂಧಿಸಿ ಬುಧವಾರ ಫೆಡರಲ್ ಕೋರ್ಟ್‌ಗೆ ಹಾಜರು ಪಡಿಸಿದ್ದರು. ಈ ವೇಳೆ ಆರಂಭಿಕ ವಿಚಾರಣೆ ನಡೆಸಿದ ಯುಎಸ್ ಮ್ಯಾಜಿಸ್ಟ್ರೇಟ್ ನ್ಯಾಯಾಧೀಶ, ಆರೋಪಿಯನ್ನು ಮೇ 30ರವರೆಗೂ ಪೊಲೀಸರ ವಶದಲ್ಲೇ ಇರಿಸಿ ವಿಚಾರಣೆ ನಡೆಸಲು ಆದೇಶಿಸಿದ್ದಾರೆ. ಇದೇ ವೇಳೆ ಸಾಯಿ ವಿರುದ್ಧದ ಆರೋಪಗಳನ್ನು ಪರಿಗಣಿಸಿದರೆ ಆತನಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 2.50 ಲಕ್ಷ ಡಾಲರ್ ದಂಡವನ್ನು ವಿಧಿಸುವ ಸಾಧ್ಯತೆಗಳಿದೆ ಎಂದಿದ್ದಾರೆ. ನಾಜಿ ಆಡಳಿತದ ಬೆಂಬಲಿಗನಾಗಿರುವ ಸಾಯಿ, ಮಂಗಳವಾರ ತಡರಾತ್ರಿ ಟ್ರಕ್ ಒಂದನ್ನು ಬಾಡಿಗೆ ಪಡೆದು ಶ್ವೇತಭವನಕ್ಕೆ ಡಿಕ್ಕಿ ಹೊಡೆಸಿ, ಅಲ್ಲಿಯೇ ನಾಜಿ ಬಾವುಟ ಹಾರಿಸಿದ್ದ. ಅಲ್ಲದೇ, ಬೈಡನ್ ಹತ್ಯೆ ತನ್ನ ಉದ್ದೇಶ ಎಂದಿದ್ದ.