Advertisement

ರಾಜಕೀಯ ಪಥ ಬದಲಿಸಿದ ಅಣ್ಣಾ ಆಂದೋಲನಕ್ಕೆ ದಶಕ

11:54 PM Apr 22, 2021 | Team Udayavani |

ಒಂದು ಪ್ರತಿಭಟನೆ, ಒಂದು ಸರಕಾರವನ್ನೇ ಬೀಳಿಸಬಹುದು ಮತ್ತು ಒಂದು ಸರಕಾರದ ರಚನೆಗೂ ಕಾರಣವಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದು, ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ. ಈ ಹೋರಾಟಕ್ಕೆ ಈಗ ಹತ್ತು ವರ್ಷಗಳು ಸಂದಿವೆ. 2011ರ ಎಪ್ರಿಲ್‌ 5ರಂದು ಶುರುವಾಗಿದ್ದ ಈ ಪ್ರತಿಭಟನೆ ಡಿಸೆಂಬರ್‌ 23ಕ್ಕೆ ಅಂತ್ಯ ಕಂ ಡಿತ್ತು. ಈ ಆಂದೋಲನದ ಬಿಸಿಗೆ ಆಗಿನ ಯುಪಿಎ 2 ಸರಕಾರ ಸಂಪೂರ್ಣವಾಗಿ ನಲುಗಿಹೋಗಿತ್ತು. ವಿಚಿತ್ರವೆಂದರೆ, ಈ ಪ್ರತಿಭಟನೆಯ ಅನಂತರ ಶುರುವಾದ ಆಡಳಿತ ವಿರೋಧಿ ಅಲೆ, 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಸೋಲಲೂ ಕಾರಣವಾಯಿತು.

Advertisement

2011 :

ಎ.5 – ಲೋಕಪಾಲ್‌ ಮಸೂದೆಗಾಗಿ ಆಗ್ರಹಿಸಿ ಅಣ್ಣಾ ಹಜಾರೆ ಅವರಿಂದ ದಿಲ್ಲಿಯ ಜಂತರ್‌  ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಆರಂಭ.

ಎ.9 – ಮಸೂದೆಗಾಗಿ ಜಂಟಿ ಸಮಿತಿ ರಚನೆ ಮಾಡಲು ಯುಪಿಎ ಸರಕಾರ ಒಪ್ಪಿಗೆ

ಎ.16 – ಜಂಟಿ ಸಮಿತಿಯ ಮೊದಲ ಸಭೆ

Advertisement

ಜೂ.21 – ಕೇಂದ್ರ ಸರಕಾರ ಮತ್ತು ಅಣ್ಣಾ  ಹಜಾರೆ ಸಮಿತಿಯ ಸಭೆ ವಿಫ‌ಲ

ಆ.16 – ಅಣ್ಣಾ ಹಜಾರೆ ಅವರಿಂದ 2ನೇ ಸುತ್ತಿನ ಉಪವಾಸ ಆರಂಭ. ಸರಕಾರದಿಂದ ಬಂಧನ

ಆ.19 – ತಿಹಾರ್‌ ಜೈಲಿನಿಂದ ಅಣ್ಣಾ ಹಜಾರೆ  ಬಿಡುಗಡೆ, ರಾಮ್‌ಲೀಲಾ ಮೈದಾನದಲ್ಲಿ  ಉಪವಾಸ ಪುನರಾರಂಭ

ಆ.27 – ಅಣ್ಣಾ ಹಜಾರೆ ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳಲು ನಿರ್ಧರಿಸಿದ ಸಂಸತ್‌

ಆ.28 – ಉಪವಾಸ ಸತ್ಯಾಗ್ರಹ ಕೈಬಿಟ್ಟ ಹಜಾರೆ

ಡಿ.23 – ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಗಳು ಸಂಸತ್‌ನಲ್ಲಿ ಮಂಡನೆ

2012 : ಅ.2 – ರಾಜಕೀಯ ಪಕ್ಷ ಸ್ಥಾಪನೆ ಮಾಡುವುದಾಗಿ ಅರವಿಂದ್‌ ಕೇಜ್ರಿವಾಲ್‌ರಿಂದ ಘೋಷಣೆ. ಬಳಿಕ ಇದಕ್ಕೆ ಆಮ್‌ ಆದ್ಮಿ ಪಾರ್ಟಿ ಎಂದು ನಾಮಕರಣ

2013 :

ಡಿಸೆಂಬರ್‌ – ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ. 2ನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಆಮ್‌ ಆದ್ಮಿ ಪಕ್ಷ(ಎಎಪಿ)

2014 :

ಜ.1 – ಲೋಕಪಾಲ ಮತ್ತು ಲೋಕಾಯುಕ್ತ ಕಾಯ್ದೆಗಳಿಗೆ ರಾಷ್ಟ್ರಪತಿಗಳಿಂದ ಸಹಿ.

2019 :

ಮಾ.19 – ನ್ಯಾ| ಪಿನಾಕಿ ಚಂದ್ರ ಬೋಸ್‌ ಅವರನ್ನು ದೇಶದ ಮೊದಲ ಲೋಕಪಾಲರಾಗಿ ನೇಮಕ.

ಅರಬ್‌ ಕ್ರಾಂತಿ ಮತ್ತು ಅಣ್ಣಾ ಆಂದೋಲನ :

10 ವರ್ಷಗಳ ಹಿಂದೆ ಅರಬ್‌ ದೇಶಗಳಲ್ಲಿ ಭಾರೀ ಪ್ರತಿಭಟನೆ ನಡೆಯುತ್ತಿತ್ತು. ಅಲ್ಲಿನ ಸರಕಾರಗಳ ವಿರುದ್ಧವೇ ಜನ ಸಿಡಿದೆದ್ದಿದ್ದರು. ಟುನೇಶಿಯಾ, ಲಿಬಿಯಾ, ಈಜಿಪ್ಟ್, ಯೆಮೆನ್‌, ಸಿರಿಯಾ ಮತ್ತು ಬಹ್ರೇನ್‌ಗಳಲ್ಲಿ ದೊಡ್ಡ ಮಟ್ಟದಲ್ಲೇ ಪ್ರತಿಭಟನೆಗಳು ನಡೆದಿದ್ದವು. ಆ ಸಂದರ್ಭದಲ್ಲಿ ಝೈನ್‌ ಎಲ್‌ ಅಬಿಡೈನ್‌ ಬೆನ್‌ ಅಲಿ, ಮುಹಮ್ಮರ್‌ ಗಡಾಫಿ, ಹೊಸ್ನಿ ಮುಬಾರಕ್‌ ಮತ್ತು ಅಲಿ ಅಬ್ದುಲ್ಲಾ ಸಲೇಹ್‌ ಅವರು ಅಧಿಕಾರದಿಂದ ಕೆಳಗಿಳಿದಿದ್ದರು, ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದರು. ವಿಶೇಷವೆಂದರೆ, ಈ ಎಲ್ಲಾ ಪ್ರತಿಭಟನೆಗಳಿಗೆ ಮೂಲವಾಗಿದ್ದು ಸಾಮಾಜಿಕ ಜಾಲತಾಣಗಳು. ಭಾರತದಲ್ಲೂ ಈ ಸಾಮಾಜಿಕ ಜಾಲತಾಣಗಳಿಂದಲೇ ಸ್ಫೂರ್ತಿ ಪಡೆದು ಅಣ್ಣಾ ಆಂದೋಲನ ರೂಪುಗೊಂಡಿತ್ತು.

10 ವರ್ಷಗಳ ನೆನಪು :

ಅಣ್ಣಾ ಹಜಾರೆ ಅವರ ಭ್ರಷ್ಟಾಚಾರ ವಿರೋಧಿ ಆಂದೋಲನ ಅಥವಾ ಅಣ್ಣಾ ಆಂದೋಲನಕ್ಕೆ ಈಗ ಸರಿಯಾಗಿ 10 ವರ್ಷ. 2011ರಲ್ಲಿ ಈ ಹೋರಾಟ ನಡೆದಿದ್ದು, ಇದಕ್ಕೆ ಪ್ರತಿಯಾಗಿ ಈಗ ದೇಶಾದ್ಯಂತ ರೈತರು ಕೇಂದ್ರ ಸರಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಣ್ಣಾ ಆಂದೋಲನಕ್ಕೆ ಸಿಕ್ಕಷ್ಟು ಜನ ಬೆಂಬಲ ಈಗ ಸಿಗದಿದ್ದರೂ, ದೇಶಾದ್ಯಂತ ಪ್ರತಿಭಟನೆಗಳಂತೂ ನಡೆಯುತ್ತಿವೆ.

ಅಣ್ಣಾ ಪ್ರತಿಭಟನೆಯ ರೂವಾರಿಗಳು :

ಅಣ್ಣಾ ಹಜಾರೆ :

ಹಿರಿಯ ಗಾಂಧೀವಾದಿ. ಮಹಾರಾಷ್ಟ್ರದ ರಾಳೇಗಾಂವ್‌ ಸಿದ್ಧಿಯವರು. ಹೋರಾಟಕ್ಕೆ ಇವರೇ ಮೂಲ ಕಾರಣ. ಸದ್ಯ ಆಮ್‌ ಆದ್ಮಿ ಪಕ್ಷ ಮತ್ತು ಶಿಷ್ಯ ಅರವಿಂದ ಕೇಜ್ರಿವಾಲ್‌ರಿಂದ ದೂರವಿದ್ದಾರೆ. ಈಗಲೂ ಮಹಾರಾಷ್ಟ್ರದಲ್ಲಿ ವಿವಿಧ ಕಾರಣಗಳಿಗಾಗಿ ಪ್ರತಿಭಟನೆ ನಡೆಸುತ್ತಾರೆ. ರೈತರ ಹೋರಾಟ ಸಂಬಂಧ ಕೇಂದ್ರ ಸರಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿ, ಬಳಿಕ ಕೈಬಿಟ್ಟರು.

ಅರವಿಂದ ಕೇಜ್ರಿವಾಲ್‌ :  

ಅಣ್ಣಾ ಹಜಾರೆ ಅವರ ಪ್ರಿಯ ಶಿಷ್ಯ ಹಾಗೂ  ದಿಲ್ಲಿಯ ಹಾಲಿ ಮುಖ್ಯಮಂತ್ರಿ. ಇವರು ಭಾರತೀಯ ಕಂದಾಯ ಸೇವೆಯ ಮಾಜಿ ಅಧಿಕಾರಿ. ಅಣ್ಣಾ ಆಂದೋಲನದ ಅನಂತರ ರಾಜಕೀಯ ಆರಂಭಿಸಿ ಅದರಲ್ಲಿ ಯಶಸ್ಸನ್ನೂ ಪಡೆದರು.

ಕಿರಣ್‌ ಬೇಡಿ  :

ನಿವೃತ್ತ ಸೂಪರ್‌ ಕಾಪ್‌ ಎಂದೇ ಗುರುತಿಸಿಕೊಂಡಿರುವ ಕಿರಣ್‌ ಬೇಡಿ ಅವರೂ ಅಣ್ಣಾ ಆಂದೋಲನದಲ್ಲಿ ಪ್ರಮುಖವಾಗಿ ಕಾಣಿಸಿಕೊಂಡಿದ್ದರು. 2015ರ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದರು. ಆದರೆ, ಕೇಜ್ರಿವಾಲ್‌ ವಿರುದ್ಧ ಸೋತರು. ಬಳಿಕ ಪುದುಚೇರಿಯಲ್ಲಿ ಲೆಫ್ಟಿನೆಂಟ್‌ ಗವರ್ನರ್‌ ಆಗಿ ಸೇವೆ ಸಲ್ಲಿಸಿದರು. ಕಳೆದ ಫೆಬ್ರವರಿಯಲ್ಲಿ ಲೆಫ್ಟಿನೆಂಟ್‌ ಹುದ್ದೆಯಿಂದ ಇವರನ್ನು  ತೆರವು ಮಾಡಲಾಯಿತು.

ಮನೀಶ್‌ ಸಿಸೋಡಿಯಾ  :

ಕೇಜ್ರಿವಾಲ್‌ ಅವರ ನೆಚ್ಚಿನ ಜತೆಗಾರ. ಅಣ್ಣಾ  ಹೋರಾಟದಲ್ಲಿ ಭಾಗಿ. ಸದ್ಯ ಕೇಜ್ರಿವಾಲ್‌  ಸಂಪುಟದಲ್ಲಿ ಪ್ರಮುಖ ಖಾತೆಗಳ ನಿರ್ವಹಣೆ. ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯ ಕನಸು  ಹೊತ್ತಿದ್ದಾರೆ.

ಬಾಬಾ ರಾಮ್‌ದೇವ್‌ :

ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ಧ ಅಣ್ಣಾ ಹಜಾರೆ ಅವರ ಹೋರಾಟಕ್ಕೆ ಪ್ರತಿಯಾಗಿ ತಾವು ಬೇರೆಯದ್ದೇ ಹೋರಾಟ ರೂಪಿಸಿದರು. ಆದರೆ ಬಿಜೆಪಿ ಬೆಂಬಲಿತ ಹೋರಾಟ ಎಂಬ ಆರೋಪವನ್ನೂ ಕೇಳಿಸಿಕೊಂಡರು.

ಯೋಗೇಂದ್ರ ಯಾದವ್‌ :

ರಾಜಕೀಯ ವಿದ್ವಾಂಸ ಮತ್ತು ಸಾಮಾಜಿಕ ಕಾರ್ಯಕರ್ತ. 2015ರ ದಿಲ್ಲಿ ಚುನಾವಣೆ ಬಳಿಕ ಅರವಿಂದ ಕೇಜ್ರಿವಾಲ್‌ರಿಂದ ಬೇರೆಯಾದರು. ಅಂದರೆ 2015ರಲ್ಲೇ ಇವರನ್ನು ಎಎಪಿಯಿಂದ ಉಚ್ಚಾಟನೆ ಮಾಡಲಾಯಿತು. ಬಳಿಕ ಸ್ವರಾಜ್‌ ಅಭಿಯಾನ ಆರಂಭಿಸಿ ರೈತರ ಸಮಸ್ಯೆಗಳ ಸಂಬಂಧ ಹೋರಾಟ ನಡೆಸುತ್ತಿದ್ದಾರೆ.

ಪ್ರಶಾಂತ್‌ ಭೂಷಣ್‌ :

ಹಿರಿಯ ವಕೀಲರು ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಪ್ರಶಾಂತ್‌ ಭೂಷಣ್‌ ಅವರು ಅಣ್ಣಾ ಆಂದೋಲನದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದರು. ಇವರನ್ನೂ ಆಪ್‌ನಿಂದ ಉಚ್ಚಾಟನೆ ಮಾಡಲಾಯಿತು. ಈಗಲೂ ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಕೋರ್ಟ್‌ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಸರಕಾರಗಳ ವಿರುದ್ಧ ಸೆಣಸುತ್ತಿದ್ದಾರೆ.

ಕುಮಾರ್‌ ವಿಶ್ವಾಸ್‌ :

ಒಂದು ಕಾಲದಲ್ಲಿ ಆಪ್‌ನ ಪ್ರಮುಖ  ಸದಸ್ಯರಾಗಿದ್ದ ಕುಮಾರ್‌ ವಿಶ್ವಾಸ್‌, ಸದ್ಯ  ರಾಜಕೀಯದಲ್ಲಿ ಇಲ್ಲ. ಕವಿಯೂ ಆಗಿರುವ ಕುಮಾರ್‌ ವಿಶ್ವಾಸ್‌, ಈಗ ಕವಿ ಸಮ್ಮೇಳನಗಳಲ್ಲಿ ಭಾಗಿಯಾಗುತ್ತಿದ್ದಾರೆ. ಕೇಜ್ರಿವಾಲ್‌ ವಿರುದ್ಧ ಆಗಾಗ ಟೀಕೆಗಳ ಮಳೆ ಸುರಿಸುತ್ತಲೇ  ಇರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next