Advertisement

ಅತ್ಯಾಚಾರಿ ರಾಮ್ ರಹೀಮ್ ಗೆ 20 ವರ್ಷ ಜೈಲು; 30 ಲಕ್ಷ ರೂ. ದಂಡ

03:31 PM Aug 28, 2017 | Team Udayavani |

ರೋಹ್ಟಕ್/ನವದೆಹಲಿ: ಅತ್ಯಾಚಾರ ಪ್ರಕರಣದಲ್ಲಿ ದೋಷಿ ಎಂದು ಘೋಷಿತವಾಗಿರುವ ಡೇರಾ ಸಚ್ಚಾ ಸೌದಾದ ಸ್ವಘೋಷಿತ ದೇವಮಾನವ ಗುರ್ಮೀತ್ ರಾಂ ರಹೀಂ ಸಿಂಗ್ ಗೆ ಸೋಮವಾರ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಜಗದೀಪ್ ಸಿಂಗ್ ಅವರು ರೋಹ್ಟಕ್ ಜೈಲಿನಲ್ಲಿಯೇ 20 ವರ್ಷ ಜೈಲು ಶಿಕ್ಷೆ ಹಾಗೂ 30 ಲಕ್ಷ ರೂಪಾಯಿ ದಂಡ ವಿಧಿಸಿದರು. 

Advertisement

ಅತ್ಯಾಚಾರ ಪ್ರಕರಣದ ಕುರಿತಂತೆ ವಾದ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಧೀಶರು ತೀರ್ಪು ಓದಲು ಆರಂಭಿಸಿದಾಗ ಡೇರಾ ಮುಖ್ಯಸ್ಥ ರಾಮ್ ರಹೀಂ ಸಿಂಗ್ ತನ್ನ ತಪ್ಪನ್ನು ಕ್ಷಮಿಸುವಂತೆ ಹೇಳಿ ಕುಸಿದು ಬಿದ್ದ ಘಟನೆ ನಡೆದಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

ರೋಹ್ಟಕ್ ಜೈಲಿನಲ್ಲಿಯೇ ಅತ್ಯಾಚಾರಿ ರಾಂ ರಹೀಂಗೆ ನ್ಯಾಯಾಧೀಶರು ಶಿಕ್ಷೆಯನ್ನು ಪ್ರಕಟಿಸಿದರು. ಜೈಲಿನ ಸುತ್ತ 17 ಸಾವಿರ ಪೊಲೀಸ್ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು.

ಮೊದಲಿಗೆ ಸುನಾರಿಯ ಜೈಲಿನಲ್ಲಿ  ರಾಮ್ ರಹೀಮ್ ಪರ ವಕೀಲರು ವಾದ ಮಂಡಿಸಿದ್ದರು. ವಕೀಲರಾದ ಎಸ್ ಕೆ ಗಾರ್ಗ್ ನರ್ವಾನ್ ಬಾಬಾ ಪರ ವಾದಿಸಿದ್ದರು. ಎರಡೂ ಕಡೆಯ ವಕೀಲರಿಗೆ ನ್ಯಾಯಾಧೀಶರು ತಲಾ 10 ನಿಮಿಷ ವಾದ ಮಂಡಿಸಲು ಅವಕಾಶ ಕಲ್ಪಿಸಿದ್ದರು.

ರಾಂ ರಹೀಂ ವಯಸ್ಸು, ಆರೋಗ್ಯ ಪರಿಗಣಿಸಿ ಕಡಿಮೆ ಶಿಕ್ಷೆ ಕೊಡಿ ಎಂದು ರಾಮ್ ರಹೀಮ್ ಸಿಂಗ್ ಪರ ವಕೀಲ ಗಾರ್ಗ್ ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡಿದ್ದರು. ಅತ್ಯಾಚಾರಿ ರಾಂ ರಹೀಂಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಪ್ರಾಸಿಕ್ಯೂಷನ್(ಸಿಬಿಐ) ಪರ ವಕೀಲರು ಪ್ರತಿ ವಾದ ಮಂಡಿಸಿದ್ದರು.

Advertisement

ರಾಮ್ ರಹೀಮ್ ಸಿಂಗ್ ಗೆ ಐಪಿಸಿ ಸೆಕ್ಷನ್ 376(ಅತ್ಯಾಚಾರ), 506(ಜೀವ ಬೆದರಿಕೆ), 511ರ ಅಡಿ ನ್ಯಾಯಾಧೀಶರಾದ ಜಗದೀಪ್ ಸಿಂಗ್ ಅವರು ಗರಿಷ್ಠ (2 ಅತ್ಯಾಚಾರ ಪ್ರಕರಣಗಳು ಸೇರಿ 20ವರ್ಷ) ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ.

ರೇಪಿಸ್ಟ್ ಬಾಬಾಗೆ ವಿವಿಐಪಿ ಸೌಕರ್ಯ ಕೊಡುವಂತಿಲ್ಲ:

ಅತ್ಯಾಚಾರ ಪ್ರಕರಣದಲ್ಲಿ  20 ವರ್ಷಗಳ ಜೈಲುಶಿಕ್ಷೆಗೆ ಗುರಿಯಾಗಿರುವ ಗುರ್ಮೀತ್ ರಾಮ್ ರಹೀಮ್ ಸಿಂಗ್ ಗೆ ಯಾವುದೇ ವಿಶೇಷ ಸೌಲಭ್ಯ ಕೊಡುವಂತಿಲ್ಲ ಎಂದು ಕೋರ್ಟ್ ಜೈಲು ಅಧಿಕಾರಿಗಳಿಗೆ ಸ್ಪಷ್ಟ ಆದೇಶ ನೀಡಿದೆ.

ಅಳುತ್ತಾ ಕಟಕಟೆಯಲ್ಲಿ ಕುಸಿದು ಬಿದ್ದು ನಾಟಕವಾಡಿದ ರಾಮ್ ರಹೀಮ್!

ಅತ್ಯಾಚಾರ ಪ್ರಕರಣದಲ್ಲಿ 20 ವರ್ಷ ಕಠಿಣ ಜೈಲುಶಿಕ್ಷೆಯನ್ನು ನ್ಯಾಯಾಧೀಶರು ಪ್ರಕಟಿಸಿದ ಬಳಿಕ ಗುರ್ಮೀತ್ ರಾಮ್ ರಹೀಮ್ ಸಿಂಗ್ ಕಟಕಟೆಯಲ್ಲಿಯೇ ಅಳುತ್ತಾ ಕುಸಿದು ಬಿದ್ದು ನಾಟಕವಾಡಿರುವ ಘಟನೆ ನಡೆದಿತ್ತು, ಬಳಿಕ ಕೋರ್ಟ್ ಹಾಲ್ ನಿಂದ ಹೊರಗೆ ಬರಲು ನಿರಾಕರಿಸಿದ್ದ. ಕೊನೆಗೆ ಪೊಲೀಸರು ರಾಮ್ ರಹೀಮ್ ನನ್ನು ಬಲವಂತವಾಗಿ ಕೋರ್ಟ್ ಹಾಲ್ ನಿಂದ ಹೊರಗೆ ಕರೆ ತಂದಿರುವುದಾಗಿ ವರದಿ ತಿಳಿಸಿದೆ.

ಸಿರ್ಸಾ ಆಶ್ರಮದಲ್ಲಿ 36 ಸಾವಿರ ಬೆಂಬಲಿಗರು:

ಸಿರ್ಸಾ ಆಶ್ರಮದಲ್ಲಿ ಸುಮಾರು 36ಸಾವಿರ ರಾಮ್ ರಹೀಮ್ ಸಿಂಗ್ ಅನುಯಾಯಿಗಳು ಜಮಾವಣೆಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next