ಗದಗ: ಜಿಲ್ಲೆಯಲ್ಲಿ ದಿನ ಕಳೆದಂತೆ ಕೋವಿಡ್ ರಣಕೇಕೆ ಜೋರಾಗಿದೆ. ಕೋವಿಡ್-19 ತಡೆಗಾಗಿ ಸೋಂಕಿತರ ಚಿಕಿತ್ಸೆಗಾಗಿ ಇದೀಗ ರಾಜ್ಯ ಸರಕಾರ ಜಿಲ್ಲೆಯ 10 ಖಾಸಗಿ ಆಸ್ಪತೆಗಳನ್ನು ಗುರುತಿಸಿದೆ. ಆದರೆ, ಸರಕಾರದ ಈ ಪ್ರಯತ್ನಕ್ಕೆ ಖಾಸಗಿ ಆಸ್ಪತ್ರೆಗಳಿಂದ ಅಪಸ್ವರ ಕೇಳಿ ಬಂದಿದೆ.
ಕಳೆದ ಒಂದು ತಿಂಗಳಿಂದ ಜಿಲ್ಲೆಯಲ್ಲಿ ಕೋವಿಡ್ ಸೋಂಕು ಗಗನ ಮುಖೀಯಾಗಿದೆ. ಜಿಲ್ಲೆಯಲ್ಲಿ ಏ.8ರಿಂದ ಈವರೆಗೆ ಕೇವಲ ಇಬ್ಬರು ಮಾತ್ರ ಬಲಿಯಾಗಿದ್ದರೂ, ಸೋಂಕಿತ ಸಂಖ್ಯೆ ಏರುಮುಖವಾಗಿದೆ. ಅದರಲ್ಲೂ ಮುಂಬೈ-ಗದಗ ಎಕ್ಸಪ್ರಸ್ ರೈಲು ಆರಂಭದ ಬಳಿಕ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಅದರೊಂದಿಗೆ ಪ್ರವಾಸ, ಶುಭ ಸಮಾರಂಭಗಳಲ್ಲಿ ಪಾಲ್ಗೊಂಡಿರುವುದು, ಅನ್ಯ ಜಿಲ್ಲೆಯ ಸಂಬಂಧಿಕರು ಭೇಟಿ ನೀಡಿದ ಫಲವಾಗಿ ಹರ್ತಿ ಸೇರಿದಂತೆ ಜಿಲ್ಲೆಯ ವಿವಿಧ ಗ್ರಾಮಗಳಿಗೂ ಕೊರೊನಾ ವ್ಯಾಪಿಸಿದೆ.
ವೈದ್ಯಕೀಯ ಸೌಲಭ್ಯಕ್ಕೆ ಒತ್ತು: ಕೋವಿಡ್ ಸೋಂಕಿತರ ಚಿಕಿತ್ಸೆಗಾಗಿ 100 ಹಾಸಿಗೆಗಳ ಅತ್ಯಾಧನಿಕ ಸೌಲಭ್ಯಗಳನ್ನು ಹೊಂದಿರುವ ನೂತನ ಆಯುಷ್ ಆಸ್ಪತ್ರೆ ಯ ಕಟ್ಟಡವನ್ನು ಈಗಾಗಲೇ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿದೆ. ಸದ್ಯ ನಿಗದಿತ ಆಸ್ಪತ್ರೆಯಲ್ಲೇ ಕೋವಿಡ್ ರೋಗಿಗಳಿಗೆ ಜಿಮ್ಸ್ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ನಿರೀಕ್ಷೆ ಮೀರಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿದ್ದಾರೆ. ಜಿಲ್ಲೆಯಲ್ಲಿ ಏ.7ರಿಂದ ಈ ವರೆಗೆ ಒಟ್ಟು 79 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ 42 ಜನರು ಸೋಂಕಿನಿಂದ ಮುಕ್ತರಾಗಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಸಕ್ರಿಯವಾಗಿರುವ 35 ಜನರಿಗೆ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಕ್ಕೂ ಸೋಂಕು ಹಬ್ಬುತ್ತಿರುವುದರಿಂದ ರಾಜ್ಯ ಸರಕಾರ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಲು ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ಸೋಂಕಿತರಿಗೆ ಸರಕಾರಿ ಆಸ್ಪತ್ರೆಯಲ್ಲಿ ಸ್ಥಳಾವಕಾಶದ ಕೊರತೆ ಎದುರಾದಲ್ಲಿ ಖಾಸಗಿ ಆಸ್ಪತ್ರೆಗಳನ್ನು ಬಳಸಿಕೊಳ್ಳಲು ಹಾಗೂ ಸ್ಥಿತಿವಂತರು ಬಯಸಿದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ನೀಡುವ ಕುರಿತು ಚಿಂತನೆ ನಡೆಸಿದೆ. ಅದರ ಭಾಗವಾಗಿ ಆರೋಗ್ಯ ಕರ್ನಾಟಕ ಮತ್ತು ಆಯುಷ್ಮಾನ್ ಭಾರತ ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳ ಪೈಕಿ ಜಿಲ್ಲೆಯ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಹೊಂದಿರುವ 10 ಖಾಸಗಿ ಆಸ್ಪತ್ರೆಗಳನ್ನು ಕೋವಿಡ್ ಚಿಕಿತ್ಸೆ ಗುರುತಿಸಿದೆ.
ಚಿಕಿತ್ಸೆಗೆ ಖಾಸಗಿ ವೈದ್ಯರ ಅಪಸ್ವರ?: ಜಿಲ್ಲೆಯ 10 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸೆ ಆರಂಭಿಸಬೇಕೆಂಬ ಚಿಂತನೆಗೆ ಸ್ಥಳೀಯ ಖಾಸಗಿ ವೈದ್ಯರಿಂದ ಅಪಸ್ವರ ಕೇಳಿ ಬಂದಿದೆ. ನಗರದ ಕೆಲ ಆಸ್ಪತ್ರೆಗಳಲ್ಲಿ ವೆಂಟಿಲೇಟರ್, ಕೃತಕ ಉಸಿರಾಟ ಸೇರಿದಂತೆ ಅಗತ್ಯ ಸೌಲಭ್ಯಗಳಿದ್ದರೂ, ನುರಿತ ವೈದ್ಯರ ಕೊರತೆ ಇದೆ. ಹೀಗಾಗಿ ಹೆಚ್ಚಿನ ಆಸ್ಪತ್ರೆಗಳಲ್ಲಿ ಏಕಕಾಲಕ್ಕೆ ಕೋವಿಡ್ ಚಿಕಿತ್ಸೆ ನೀಡುವುದರಿಂದ ವೈದ್ಯಕೀಯ ಸೇವೆ ಒದಗಿಸಲು ಹಿನ್ನಡೆಯಾಗಬಹುದು. ಹೀಗಾಗಿ ಯಾವುದಾದರೂ ಒಂದು ಖಾಸಗಿ ಆಸ್ಪತ್ರೆಯನ್ನು ಕೋವಿಡ್ ಚಿಕಿತ್ಸೆಗೆ ಮೀಸಲಿಡುವುದರಿಂದ ಹೆಚ್ಚಿನ ಅನುಕೂಲವಾಗುತ್ತದೆ. ಅಗತ್ಯವಾದರೆ, ಎಲ್ಲ ಖಾಸಗಿ ಆಸ್ಪತ್ರೆಗಳ ವೈದ್ಯರೂ ಪಾಳೆಯಂತೆ ಕೆಲಸ ಮಾಡಬಹುದು. ಆಸ್ಪತ್ರೆಗೆ ಬರುವ ಇತರೆ ರೋಗಿಗಳಿಗೆ ಕೋವಿಡ್ ಹರಡುವಿಕೆಯನ್ನು ತಡೆಗಟ್ಟಲು ಸಾಧ್ಯವಾಗುತ್ತದೆ. ಒಂದೊಮ್ಮೆ ಆಸ್ಪತ್ರೆಯ ಯಾವುದೇ ರೋಗಿಗೆ ಕೋವಿಡ್ ಕಂಡುಬಂದಲ್ಲಿ, ಇಡೀ
ಆಸ್ಪತ್ರೆಯನ್ನು ಸೀಲ್‌ಡೌನ್ ಮಾಡಿ, ಎಲ್ಲ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಬೇಕಾಗುತ್ತದೆ. ಇದರಿಂದ ಸಮಸ್ಯೆಗಳೇ ಹೆಚ್ಚು ಎಂಬುದು ಖಾಸಗಿ ವೈದ್ಯರ ವಾದ.
ಯಾವ್ಯಾವ ಆಸ್ಪತ್ರೆಗಳ ಆಯ್ಕೆ?: ಗದುಗಿನ ಎಂ.ಜಿ.ಎಂ ಮಲ್ಪಿಸ್ಟೆಷಾಲಿಟಿ ಆಸ್ಪತ್ರೆ, ಡಾ|ಎನ್.ಬಿ.ಪಾಟೀಲ ಆಸ್ಪತ್ರೆ, ಕೆ.ಎಚ್.ಪಾಟೀಲ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ಬೆಟಗೇರಿಯ ಸಿಐಎಸ್ ಆಸ್ಪತ್ರೆ, ಸ್ಪರ್ಶ ಆಸ್ಪತ್ರೆ, ಹುಯಿಲಗೋಳ ಸಿಟಿ ಹಾಸ್ಪಿಟಲ್, ವಾತ್ಸಲ್ಯ ಆಸ್ಪತ್ರೆ, ರೋಣ ಪಟ್ಟಣದ ರಾಜೀವಗಾಂಧಿ ಆಸ್ಪತ್ರೆ, ನರೇಗಲ್‌ನ ಅನಿಲ್ ಕಾಳೆ ಮೆಮೋರಿಯಲ್ ಆಶೀರ್ವಾದ ಆಸ್ಪತ್ರೆ ಸೇರಿದಂತೆ 10 ಆಸ್ಪತ್ರೆಗಳನ್ನು ಪಟ್ಟಿ ಮಾಡಲಾಗಿದೆ.
ಜಿಲ್ಲೆಯಲ್ಲಿ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ಗಳು ಬಳಕೆಯಾಗಿಲ್ಲ. ಹೀಗಾಗಿ ಸದ್ಯಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುವ ಅನಿವಾರ್ಯತೆ ಎದುರಾಗಿಲ್ಲ. ಆದರೂ, ಮುಂಜಾಗ್ರತಾ ಕ್ರಮವಾಗಿ ಖಾಸಗಿ ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಕೋವಿಡ್‌ನಂತಹ ತುರ್ತು ಪರಿಸ್ಥಿತಿಯಲ್ಲಿ ಸರಕಾರದ ನಿಮಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.
-ಸಿ.ಸಿ. ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ
ಕೋವಿಡ್ ಚಿಕಿತ್ಸೆಗಾಗಿ ಸರಕಾರ ನಗರದ 6 ಸೇರಿದಂತೆ ಒಟ್ಟು 10 ಖಾಸಗಿ ಆಸ್ಪತ್ರೆಗಳನ್ನು ಪಟ್ಟಿ ಮಾಡಿದೆ. ಈ ಬಗ್ಗೆ ನಮಗೆ ಅಧಿಕೃತ ಮಾಹಿತಿ ಇಲ್ಲ. ಕೋವಿಡ್ ಚಿಕಿತ್ಸೆಗೆ ನಾವು ಹಿಂದೇಟು ಹಾಕುತ್ತಿಲ್ಲ ಬದಲಾಗಿ ಈ ಕ್ರಮದಿಂದ ಅನಾನೂಕಲವೇ ಹೆಚ್ಚು ಎಂದು ಭಾವಿಸಿದ್ದೇವೆ. ಈ ಕುರಿತು ಶೀಘ್ರವೇ ಜಿಲ್ಲಾ ಧಿಕಾರಿಗಳನ್ನು ಭೇಟಿ ಮಾಡಿ, ಮನವಿ ಸಲ್ಲಿಸುತ್ತೇವೆ.
-ಡಾ|ಧನೇಶ್ ದೇಸಾಯಿ, ಐಎಂಎ ಅಧ್ಯಕ್ಷ.
–ವೀರೇಂದ್ರ ನಾಲಗದಿನ್ನಿ