ಬೆಂಗಳೂರು: ವಿದ್ಯಾರ್ಥಿಗಳು ಪರೀಕ್ಷಾ ಸಮಯದಲ್ಲಿ ಪಾಠಕ್ಕೆ ಸಂಬಂಧಿಸಿದ ಅಂಶಗಳನ್ನು ಸುಲಭವಾಗಿ ಮನನ ಮಾಡಿಕೊಳ್ಳಲು ಹಾಗೂ ನೆನಪಿನಲ್ಲಿಟ್ಟುಕೊಳ್ಳಲು ಪೂರಕವಾಗಿ ಪಿಯು ಇಲಾಖೆಯು ಪ್ರತಿ ಅಧ್ಯಾಯಕ್ಕೆ ಸಂಬಂಧಿಸಿದ ಹತ್ತು ನಿಮಿಷದ ವೀಡಿಯೋಗಳನ್ನು ಪ್ರಕಟಿಸಲು ಮುಂದಾಗಿದೆ.
ಆನ್ಲೈನ್ ತರಗತಿಗಳ ವೀಡಿಯೋಗಳು ಈಗಾಗಲೇ ಇಲಾಖೆ ವೆಬ್ಸೈಟ್ನಲ್ಲಿ ಹಾಗೂ ಕೇಂದ್ರ ಸರಕಾರದ ದೀಕ್ಷಾ ಆ್ಯಪ್ನಲ್ಲಿ ಅಪ್ಲೋಡ್ ಮಾಡಲಾಗಿದೆ. ವಿದ್ಯಾರ್ಥಿಗಳು ಪೂರ್ಣಪಾಠಕ್ಕೆ ಈ ವೀಡಿಯೋಗಳನ್ನು ಕೇಳಬಹುದು. ಇವುಗಳನ್ನು ಹೊರತುಪಡಿಸಿ ಹೊಸ ವೀಡಿಯೋಗಳನ್ನು ಸಿದ್ಧಪಡಿಸಲಾಗುತ್ತದೆ. ಇವುಗಳನ್ನು ವಾಟ್ಸ್ ಆ್ಯಪ್ ಮೂಲಕವೇ ವಿದ್ಯಾರ್ಥಿಗಳಿಗೆ ಲಿಂಕ್ ಕಳಿಸಿ ಸುಲಭವಾಗಿ ಸಿಗುವಂತೆ ಮಾಡುವುದು ಇಲಾಖೆ ಉದ್ದೇಶವಾಗಿದೆ.
ಮೊಬೈಲ್ ನೆಟ್ವರ್ಕ್ ಮತ್ತು ಇಂಟರ್ನೆಟ್ ಡೇಟಾ ಸಮಸ್ಯೆಯಿಂದ ಕೊರೊನಾ ಲಾಕ್ಡೌನ್ ಸಮಯದಲ್ಲಿ ಗ್ರಾಮೀಣ ಭಾಗದಲ್ಲಿ ಮಕ್ಕಳು ಆನ್ಲೈನ್ ತರಗತಿಗಳನ್ನು ಕೇಳಲು ಸಮಸ್ಯೆಯಾಗಿದ್ದು, ಅಂಥವರಿಗೆ ವೀಡಿಯೋ ಸಹಾಯವಾಗಲಿದೆ. ವಾಟ್ಸ್ಆ್ಯಪ್ ಮೂಲಕವೇ ಲಿಂಕ್ ಕಳುಹಿಸುವುದರಿಂದ ನೆಟ್ವರ್ಕ್ ಇರುವಲ್ಲಿ ಡೌನ್ಲೋಡ್ ಮಾಡಿ ಸಮಯ ಸಿಕ್ಕಾಗ ಕೇಳಬಹುದಾಗಿದೆ.
ಲಾಕ್ಡೌನ್ ಸಮಯದಲ್ಲಿ ಭೌತಿಕ ತರಗತಿಗಳನ್ನು ನಡೆಸಲು ಅವಕಾಶವಿಲ್ಲದಿದ್ದರಿಂದ ಆನ್ಲೈನ್ ಮೂಲಕ ಬೋಧಿಸಲಾಗಿತ್ತು. ಈ ವೇಳೆ ವಿದ್ಯಾರ್ಥಿ ಗಳು ಗಂಟೆಗಟ್ಟಲೆ ಕುಳಿತು ಪಾಠ ಕೇಳ ಬೇಕಿತ್ತು. ಇದರಿಂದ ಕೆಲವು ವಿದ್ಯಾರ್ಥಿಗಳಿಗೆ ಕಿರಿಕಿರಿಯಾಗುತ್ತಿತ್ತು.
ಇಂತಹ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಅರ್ಧ ಗಂಟೆ, ಮುಕ್ಕಾಲು ಗಂಟೆ ಕುಳಿತ ಪಾಠ ಕೇಳುವ ಬದಲು ಕೇವಲ ಹತ್ತು ನಿಮಿಷಗಳಲ್ಲಿ ಅಧ್ಯಾಯಕ್ಕೆ ಸಂಬಂಧಿಸಿದ ಅಂಶಗಳನ್ನು ಸಂಕ್ಷಿಪ್ತವಾಗಿ ತಿಳಿಸುವ ಮತ್ತು ಪರೀಕ್ಷೆಗೆ ಸಂಬಂಧಿಸಿದ ಅಂಶಗಳು ವೀಡಿಯೋದಲ್ಲಿ ಇರಲಿವೆ. ವಿವಿಧ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ನಿಧಿ (ಸಿಎಸ್ಆರ್) ಬಳಸಿಕೊಂಡು ವೀಡಿಯೋ ಮಾಡಿಸಲು ಸಿದ್ಧತೆ ನಡೆಸಿದೆ ಎಂದು ತಿಳಿದು ಬಂದಿದೆ.
Related Articles
ಸಿಎಸ್ಆರ್ ನಿಧಿ ಉಪಯೋಗ
ವೃತ್ತಿಪರ ಉಪನ್ಯಾಸಕರಿಂದಲೇ ವೀಡಿಯೋ ಮಾಡಿಸ ಲಾಗುವುದು. ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚು ಉಪಯೋಗವಾಗಲಿದೆ. ವಿದ್ಯಾರ್ಥಿಗಳು ಒಂದು ಬಾರಿ ಓದಿದ ಬಳಿಕ ಮತ್ತೊಮ್ಮೆ ಕೇಳುವುದರಿಂದ ಹೆಚ್ಚು ನೆನಪಿನಲ್ಲಿ ಉಳಿಯಲಿದೆ. ಕೆಲವೊಂದು ಸಂಸ್ಥೆಗಳ ಜತೆ ಈಗಾಗಲೇ ಮಾತುಕತೆ ನಡೆಸಲಾಗಿದೆ. ಆದಷ್ಟು ಬೇಗ ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತದೆ ಎನ್ನುತ್ತಾರೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕಿ ಆರ್. ಸ್ನೇಹಲ್.
ಆನ್ಲೈನ್ನಲ್ಲಿ ಅರ್ಧ, ಮುಕ್ಕಾಲು ಗಂಟೆ ತರಗತಿ ಕೇಳಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮತ್ತು ಪರೀಕ್ಷಾ ದೃಷ್ಟಿಯಿಂದ ಹತ್ತು ನಿಮಿಷಗಳ ವೀಡಿಯೋಗಳನ್ನು ಮಾಡಲು ಸಿದ್ಧತೆ ನಡೆಸಲಾಗುತ್ತಿದೆ.
– ಆರ್. ಸ್ನೇಹಲ್, ಪಿಯು ಇಲಾಖೆ ನಿರ್ದೇಶಕಿ
-ಎನ್.ಎಲ್. ಶಿವಮಾದು