Advertisement

10 ಲಕ್ಷ ಗರ್ಭಿಣಿ, ಬಾಣಂತಿಯರಿಗೆ ಬಿಸಿಯೂಟ

11:35 AM Oct 03, 2017 | Team Udayavani |

ಬೆಂಗಳೂರು: “ಮಹಾತ್ಮ ಗಾಂಧೀಜಿ ಅವರರಾಮರಾಜ್ಯದ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಹಲವಾರು ಜನಸ್ನೇಹಿ ಕಾರ್ಯ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ರಾಜ್ಯದ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೋಗ್ಯ ಸಂರಕ್ಷಣೆಗಾಗಿ ಮಧ್ಯಾಹ್ನ ಪೌಷ್ಟಿಕ ಬಿಸಿಯೂಟ ವಿತರಿಸುವ ಮಾತೃಪೂರ್ಣ ಯೋಜನೆ ಜಾರಿ ಗೊಳಿಸಲಾಗಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತೃ ಪೂರ್ಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, “ರಾಮಾಯಣ ದಲ್ಲಿ ರಾಮನನ್ನು ಮರ್ಯಾದಾಪುರು ಷೋತ್ತಮ ಎನ್ನಲಾಗುತ್ತದೆ. ಆ ರೀತಿಯ ರಾಮರಾಜ್ಯ ನಿರ್ಮಾಣವಾಗಬೇಕೆಂದು ಗಾಂಧೀಜಿ ಪ್ರತಿಪಾದಿಸುತ್ತಿದ್ದರು. ಪಂಚಾ ಯತ್ರಾಜ್ ವ್ಯವಸ್ಥೆ, ಅಧಿಕಾರ ವಿಕೇಂದ್ರೀ
ಕರಣ, ಹಳ್ಳಿಯಿಂದ ದಿಲ್ಲಿವರೆಗೆ ಅಧಿಕಾರಕ್ಕೇರುವ ವ್ಯವಸ್ಥೆಗಳು, ಗಾಂಧೀಜಿ ಆಶಯ ಗಳನ್ನು ಸಾಕಾರಗೊಳಿಸಲು ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗು ತ್ತಿದೆ’ ಎಂದು ತಿಳಿಸಿದರು.

“ರಾಜ್ಯದಲ್ಲಿ 10 ಲಕ್ಷ ಗರ್ಭಿಣಿ, ಬಾಣಂತಿ ಯರಿದ್ದಾರೆ. ಸಮಾಜದಲ್ಲಿ ಬಹಳಷ್ಟು ಜನರಿಗೆ ಪೌಷ್ಟಿಕ ಆಹಾರ ಸಿಗುವುದಿಲ್ಲ. ಅದರಲ್ಲೂ ಬಾಣಂತಿಯರಿಗೆ ಪೌಷ್ಟಿಕ ಆಹಾರ ಸಿಗುವುದು ಬಹಳ ಕಷ್ಟ. ಗರ್ಭಿಣಿಯರಾಗಿದ್ದಾಗ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯ ಕಾಪಾಡಿಕೊಂಡರೆ ಆರೋಗ್ಯ ವಂತ ಮಕ್ಕಳು ಜನಿಸುತ್ತವೆ. ಜನಿಸಿದ ಮಕ್ಕಳು ತಾಯಿಯ ಎದೆಹಾಲನ್ನೇ ಅವಲಂಬಿಸಿರುತ್ತವೆ. ಹಾಗಾಗಿ ಬಾಣಂತಿಯರು ಪೌಷ್ಟಿಕ ಆಹಾರ ಸೇವಿಸಬೇಕಾಗುತ್ತದೆ. ಗರ್ಭಿಣಿಯರು, ಬಾಣಂತಿಯರು, ಮಕ್ಕಳ ಆರೋಗ್ಯಕ್ಕಾಗಿ ಮಾತೃಪೂರ್ಣ ಯೋಜನೆ ಲೋಕಾರ್ಪಣೆ ಮಾಡಲಾಗಿದೆ. ಆಂಧ್ರ ಪ್ರದೇಶ, ತೆಲಂಗಾಣ ನಂತರ ಕರ್ನಾಟಕದಲ್ಲಿ ಯೋಜನೆ ಜಾರಿಯಾಗಿದೆ’ ಎಂದು ಹೇಳಿದರು.

“ಗ್ರಾಮೀಣ ಬಡವರಿಗೆ ಆರ್ಥಿಕ ಸಾಮಾಜಿಕ ನ್ಯಾಯ ಸಿಗಬೇಕು, ರಾಜ್ಯದ ಯಾರೊಬ್ಬರೂ ಹವಿಸಿನಿಂದ ಬಳಲು
ವಂತಾಗಬಾರದು ಎಂಬ ಕಾರಣಕ್ಕೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸಲಾ ಗಿದ್ದು, 4 ಕೋಟಿ ಜನರಿಗೆ ಉಚಿತವಾಗಿ
ಮಾಸಿಕ ಏಳು ಕೆ.ಜಿ. ಅಕ್ಕಿ ನೀಡಲಾಗುತ್ತಿದೆ. ಇದರಿಂದಾಗಿ ಬರವಿದ್ದರೂ ಗುಳೇ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಅಂಗನವಾಡಿ ಮಕ್ಕಳಿಗೆ 150 ಮಿ.ಗ್ರಾಂ. ಕೆನೆಭರಿತ ಹಾಲು ನೀಡಲಾಗುತ್ತಿದ್ದು, ವಾರದಲ್ಲಿ ಎರಡು ದಿನ ಮೊಟ್ಟೆ ವಿತರಿಸ ಲಾಗುತ್ತಿದೆ. ಇದರಿಂದ ಅಪೌಷ್ಟಿಕ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಶಾಲೆಗಳಲ್ಲಿ ನೋಂದಣಿ ಹೆಚ್ಚಾಗಿದೆ. ಒಟ್ಟಾರೆ ಕರ್ನಾಟಕ ವನ್ನು ಹಸಿವು ಮುಕ್ತಗೊಳಿಸಲು ವಿವಿಧ ಕಾರ್ಯಕ್ರಮಗಳನ್ನು ಕಾರ್ಯಗತಗೊಳಿಸಲಾಗಿದೆ’ ಎಂದು ತಿಳಿಸಿದರು.

ಸಚಿವೆ ಉಮಾಶ್ರೀ ಮಾತನಾಡಿ, “ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರು ಆರಂಭಿಸಿದ ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಗಳಿಗೆ (ಐಸಿಡಿಎಸ್) ಈವರೆಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಶೇ.90ರಷ್ಟು ಅನುದಾನವನ್ನು ಈ ವರ್ಷದಿಂದ ಶೇ. 60ಕ್ಕೆ ಇಳಿಕೆ ಮಾಡಲಾಗಿದೆ. ಹಾಗಿದ್ದರೂ ರಾಜ್ಯ ಸರ್ಕಾರವೇ ಅಗತ್ಯ ಅನುದಾನ ಒದಗಿಸಿ ಯೋಜನೆಗಳನ್ನು ಕಾರ್ಯಗತ ಗೊಳಿಸುತ್ತಿದೆ. ಸಮಾನ ಆರೋಗ್ಯ, ಸದೃಢತೆ, ಹಕ್ಕುಗಳ ಪರಿಕಲ್ಪನೆಯಡಿ
ಮಾತೃಪೂರ್ಣ ಯೋಜನೆ ಜಾರಿಗೊಳಿಸಲಾಗಿದೆ ‘ ಎಂದು ತಿಳಿಸಿದರು.

Advertisement

ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್.ಉಗ್ರಪ್ಪ ಮಾತನಾಡಿ, “ಮಾತೃ
ಪೂರ್ಣ ಯೋಜನೆಯು ಮಹತ್ವಪೂರ್ಣ ಯೋಜನೆ ಎನಿಸಿದೆ. ಮಹಿಳೆಯರು, ಮಕ್ಕಳಿಗೆ ಕೆಡುಕು ಬಯಸುವವರಿಗೆ ಸಾವು ಇಲ್ಲವೇ, ಸೋಲು ಎಂಬ ಸಂದೇಶ ರಾಮಾಯಣದಲ್ಲಿದೆ. ಗರ್ಭಿಣಿಯಾಗಿದ್ದ ಸೀತೆಯನ್ನು ಕಾಡಿಗಟ್ಟಿದ ರಾಮ ತನ್ನ ಮಕ್ಕಳಿಂದಲೇ ಸೋಲಬೇಕಾಯಿತು. ಸೀತೆಯನ್ನು ಅಪಹರಿಸಿದ ರಾವಣ ಸೋತ. ಮಹಿಳೆಯರ ರಕ್ಷಣೆಯು ಸರ್ಕಾರ ಹಾಗೂ ಸಮಾಜದ ಜವಾಬ್ದಾರಿ’ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಗಳು ಸಮಾಲೋಚನಾ ಫಿಪ್ ಚಾರ್ಟ್ಬಿ ಡುಗಡೆ ಮಾಡಿದರು. ಅಲ್ಲದೆ, ಮಾನ್ವಿ,
ಜಮಖಂಡಿ, ಮಧುಗಿರಿ, ಎಚ್.ಡಿ.ಕೋಟೆ ತಾಲೂಕುಗಳಲ್ಲಿ ಯೋಜನೆಯನ್ನು ಪ್ರಾಯೋಗಿಕವಾಗಿ ಪರಿಣಾಮಕಾರಿಯಾಗಿ ಜಾರಿಗೊಳಿಸಿದವರನ್ನು ಸನ್ಮಾನಿಸಲಾಯಿತು. ಸಚಿವ ಆರ್.ರೋಷನ್ ಬೇಗ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ಚಂದ್ರ ಕುಂಟಿಯಾ, ಅಭಿವೃದ್ಧಿ ಆಯುಕ್ತ ಟಿ.ಎಂ.ವಿಜಯ ಭಾಸ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾ ದೇವನ್, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಭಾರತಿ ಶಂಕರ್, ಬಾಲಭವನ ಸೊಸೈಟಿ ಅಧ್ಯಕ್ಷೆ ಡಾ.ಅಂಜಲಿ ನಿಂಬಾಳ್ಕರ್ ಇತರರಿದ್ದರು.

ಅಂಗನವಾಡಿಗಳ ಮೂಲಕ ಮಾತೃಪೂರ್ಣ ಯೋಜನೆ ಜಾರಿಯಾಗಲಿದೆ. ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸಲು ಅಂಗನವಾಡಿ ಕಾರ್ಯಕರ್ತೆಯರು, ಮೇಲ್ವಿಚಾರಕರು ಶ್ರಮ ವಹಿಸಬೇಕು. ಹೆಣ್ಣುಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಿಸುವ ಕಾರ್ಯದಲ್ಲಿ ಸರ್ಕಾರದೊಂದಿಗೆ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರ ಜವಾಬ್ದಾರಿಯೂ ಇದೆ.
ಸಿದ್ದರಾಮಯ್ಯ, ಮುಖ್ಯಮಂತ್ರಿ

ನಿರ್ಭಯಾ ಪ್ರಕರಣದ ಬಳಿಕ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ 50,000 ರೂ.ನಿಂದ 4.50
ಲಕ್ಷ ರೂ.ವರೆಗೆ ಪರಿಹಾರ ಪಡೆಯಲು ಕೇಂದ್ರ ಸರ್ಕಾರ ನಿರ್ಭಯಾ ನಿಧಿ ಸ್ಥಾಪಿಸಿದೆ. ಆದರೆ ರಾಜ್ಯದಲ್ಲಿ 12
ಪ್ರಕರಣಗಳು ಸಂಭವಿಸಿದರೂ ಒಬ್ಬ ಸಂತ್ರಸ್ತೆಗೂ ಬಿಡಿಗಾಸೂ ಪರಿಹಾರ ಕೊಡಿಸಿಲ್ಲ. ಈ ಬಗ್ಗೆ ಸರ್ಕಾರದ
ಮುಖ್ಯ ಕಾರ್ಯದರ್ಶಿಗಳು ಗಮನ ಹರಿಸಬೇಕು.

ವಿ.ಎಸ್.ಉಗ್ರಪ್ಪ, ಮಹಿಳೆ ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next