Advertisement

ಅಡಕೆ ಟಾಸ್ಕ್ಫೋರ್ಸ್‌ಗೆ 10 ಕೋಟಿ ರೂ. ಬಿಡುಗಡೆ

05:05 PM Dec 01, 2020 | Suhan S |

ಶಿವಮೊಗ್ಗ: ಅಡಕೆ ಬೆಳೆಗಾರರ ರಕ್ಷಣೆಗೆಂದೇ ಅಸ್ತಿತ್ವಕ್ಕೆ ಬಂದಿರುವ ಅಡಕೆ ಕಾರ್ಯಪಡೆಗೆ (ಟಾಸ್ಕ್ ಫೋರ್ಸ್‌) ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು 10 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದಾರೆ ಎಂದು ಕಾರ್ಯಪಡೆ ಅಧ್ಯಕ್ಷ ಹಾಗೂ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

Advertisement

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಡಕೆ ಬೆಳೆಗಾರರು ಬಹಳ ಸಂದಿಗ್ಧ ಸ್ಥಿತಿಯಲ್ಲಿದ್ದರೂ ಬೆಲೆಯಲ್ಲಿ ಅಸ್ತಿರತೆ, ನ್ಯಾಯಾಲಯದ ಕಾಯ್ದೆಗಳು, ಅತಿವೃಷ್ಟಿ, ಅನಾವೃಷ್ಟಿ ಹೀಗೆ ಹಲವು ಕಾರಣಗಳಿಂದ ಸಂಕಷ್ಟಕ್ಕೆ ಒಳಗಾಗಿದ್ದರೂ ಸರ್ಕಾರ ಇದನ್ನು ಗಮನಿಸಿ ಅಡಕೆ ಟಾಸ್ಕ್ಫೋರ್ಸ್‌ ರಚಿಸಿತು. ತಾವು ಇದಕ್ಕೆ ಅಧ್ಯಕ್ಷನಾಗಿದ್ದೇನೆ ಎಂದರು.

ಕಾರ್ಯಪಡೆ ರಚನೆಯಾದ ನಂತರ ನಾವು ಸುಮ್ಮನೆ ಕುಳಿತುಕೊಳ್ಳಲಿಲ್ಲ.ಸರ್ಕಾರಕ್ಕೆ ನೆರವು ಕೇಳಿದ್ದೆವು.ಮುಖ್ಯಮಂತ್ರಿಗಳು 10 ಕೋಟಿ ರೂ.ಹಣ ಬಿಡುಗಡೆ ಮಾಡಲು ಒಪ್ಪಿದ್ದಾರೆ.ಈಗಾಗಲೇ ಹಣಕಾಸು ಇಲಾಖೆ ತೋಟಗಾರಿಕೆ  ಇಲಾಖೆಯ ಮೂಲಕ ಈ ಹಣವನ್ನು ಬಿಡುಗಡೆ ಮಾಡಿದೆ ಎಂದರು.

ಈ ಹಣವನ್ನು ಅಡಕೆ ಬೆಳೆಗಾರರ ಹಿತಕ್ಕಾಗಿಯೇ ಬಳಸಿಕೊಳ್ಳಲಾಗುವುದು. ಮುಖ್ಯವಾಗಿ ಅಡಕೆಗೆ ಸಂಬಂಧಿಸಿದಂತೆ ಅನೇಕ ಕೇಸುಗಳು ಸುಪ್ರಿಂ ಕೋರ್ಟ್‌ನಲ್ಲಿವೆ. ಅವುಗಳಿಂದ ನಾವು ಹೊರಬರಬೇಕಾಗಿದೆ. ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಅಡಕೆಯಲ್ಲಿ ಕ್ಯಾನ್ಸರ್‌ ಇದೆ ಎಂದು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ನಾವು ಈಗ ಅದನ್ನು ಸುಪ್ರೀಂ ಕೋರ್ಟ್‌ಗೆ ಪ್ರಶ್ನೆ ಮಾಡಿ ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸಬೇಕು. ಇದಕ್ಕಾಗಿ ಸಂಶೋಧನಾ ವರದಿ ಬೇಕಾಗಿದೆ ಎಂದರು.

ಕಾರ್ಯಪಡೆ ಈಗ ಸಂಶೋಧನಾ ವರದಿಯನ್ನು ನೀಡಲು ಎಂ.ಎಸ್‌. ರಾಮಯ್ಯ ಅನ್ವಯಿಕ ವಿಜ್ಞಾನ ವಿಭಾಗಕ್ಕೆ ಕೋರಿದೆ. ಸಂಸ್ಥೆಯ ಈಗಾಗಲೇ ಅಡಕೆ ಹಾನಿಕರ ಅಲ್ಲ ಎಂದು ವರದಿ ನೀಡುವತ್ತ ತನ್ನ ಕೆಲಸ ಮುಂದುವರಿಸುತ್ತಾ ಇದೆ. ಇನ್ನು ಕೆಲವೇ ತಿಂಗಳಲ್ಲಿ ವರದಿ ಬರಬಹುದು. ಈ ವರದಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿ ಅಡಕೆಯಲ್ಲಿ ಕ್ಯಾನ್ಸರ್‌ ಇಲ್ಲ. ಅದು ಹಾನಿಕಾರಕ ಅಲ್ಲ ಎಂಬುದನ್ನು ಸಾಬೀತುಪಡಿಸುತ್ತೇವೆ ಇದಕ್ಕಾಗಿ ತಜ್ಞ ವಕೀಲರ ನೇಮಕ ಕೂಡ ಮಾಡಲಾಗುವುದು ಎಂದರು.

Advertisement

ಇದರ ಜೊತೆಗೆ ಅಡಕೆಗೆ ಬಹುಮುಖ್ಯವಾಗಿ ಹಳದಿ ರೋಗದ ಬಾಧೆ ಇದೆ ಮತ್ತು ಹೊಸ ರೋಗ ಬಂದಿದೆ. ಅನೇಕ ಭಾಗಗಳಲ್ಲಿ ಅಡಕೆ ರೋಗ ಹಬ್ಬಿದೆ. ಇದನ್ನು ತಡೆಗಟ್ಟಲುಔಷಧ ಸಹ ಸಂಶೋಧನೆಯಾಗಬೇಕಾಗಿದೆ. ಕಾರ್ಯಪಡೆಯಿಂದ ಈ ಬಗ್ಗೆಯೂ ಚಿಂತನೆ ನಡೆದಿದೆ. ಕೇಂದ್ರ ಸರ್ಕಾರ ಅಡಕೆಯನ್ನು ಆಮದು ಮಾಡಿಕೊಳ್ಳುವುದನ್ನು ತಡೆಯಲು ಕೂಡ ಕಾರ್ಯಪಡೆ ಮನವಿ ಸಲ್ಲಿಸುತ್ತಾ ಬಂದಿದೆ.ಒಟ್ಟಾರೆ ಅಡಕೆ ಬೆಲೆಯಲ್ಲಿ ಸ್ಥಿರತೆ ಕಾಪಾಡಲು,ಅಡಕೆ ಬೆಳೆಗಾರರು ಸಂಕಟದಿಂದ ಪಾರಾಗಲು ಅಡಕೆ ಮಹಾಮಂಡಲ ಮತ್ತು ಇತರ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಪಡೆ ಅಡಕೆ ಬೆಳೆಗಾರರ ರಕ್ಷಣೆಯತ್ತ ಧಾವಿಸುತ್ತಿದೆ ಎಂದ ಅವರು, ಮುಖ್ಯಮಂತ್ರಿ ಬಿ.ಎಸ್‌ .ಯಡಿಯೂರಪ್ಪ ಅವರು ಕಾರ್ಯಪಡೆಗೆ ಹಣ ಬಿಡುಗಡೆ ಮಾಡಿದ್ದಕ್ಕೆ ಅಭಿನಂದನೆಗಳು ಎಂದರು.

ಸುದ್ದಿಗೋಷ್ಠಿಯಲ್ಲಿ ಅಡಕೆ ಮಹಾಮಂಡಲ ಹಾಗೂ ಕಾರ್ಯಪಡೆಯ ಸದಸ್ಯರಾದ ಕೊಂಕೋಡಿ ಪದ್ಮನಾಭ, ಸುಬ್ರಮಣ್ಯ ಯಡಗೆರೆ, ಶಿವಕುಮಾರ್‌, ಸುಬ್ರರಾಯ್‌ ಹೆಗಡೆ, ಸದಾಶಿವಪ್ಪ, ರವಿ, ದೇವಪ್ಪ, ಗಿರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next