Advertisement

10 ಕೋಟಿ ಮಾನವ ದಿನಗಳ ಕೆಲಸ “ಖಾತ್ರಿ’

03:45 AM Jan 03, 2017 | |

ಬೆಂಗಳೂರು: ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯದಲ್ಲಿ ಒಟ್ಟು ಕೆಲಸದ ದಿನಗಳನ್ನು 10 ಕೋಟಿಗೆ ಹೆಚ್ಚಿಸಲು ಮತ್ತು ಬರಪೀಡಿತ 136 ತಾಲೂಕುಗಳಲ್ಲಿ ಒಬ್ಬ ವ್ಯಕ್ತಿಗೆ 150 ದಿನ ಕೆಲಸ ನೀಡಲು ಕೇಂದ್ರ ಸರ್ಕಾರ ಸಮ್ಮತಿ ನೀಡಿದೆ.

Advertisement

2016-17ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಕ್ಕೆ 6.02 ಕೋಟಿ ಮಾನವ ಕೆಲಸದ ಸೃಜನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ, ಬರ ಪರಿಸ್ಥಿತಿ ತೀವ್ರವಾಗಿರುವುದರಿಂದ ಕೆಲಸದ ದಿನಗಳನ್ನು 10 ಕೋಟಿಗೆ ಏರಿಸಬೇಕು ಮತ್ತು ಬರಪೀಡಿತ ತಾಲೂಕುಗಳಲ್ಲಿ ಒಬ್ಬ ಫ‌ಲಾನುಭವಿಗೆ 200 ದಿನಗಳ ಉದ್ಯೋಗ ಖಾತರಿ ನೀಡಬೇಕು ಎಂದು ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಕೆಲಸದ ದಿನಗಳನ್ನು 10 ಕೋಟಿಗೆ ಮತ್ತು ಬರಪೀಡಿತ ತಾಲೂಕುಗಳಲ್ಲಿ ಒಬ್ಬ ವ್ಯಕ್ತಿಗೆ 150 ದಿನಗಳ ಉದ್ಯೋಗ ಖಾತರಿ ನೀಡಲು ಕೇಂದ್ರ ಸರ್ಕಾರ ಸಮ್ಮತಿಸಿ ಈ ಕುರಿತು ಆದೇಶ ಹೊರಡಿಸಿದೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ.ಪಾಟೀಲ್‌, ಇದರಿಂದಾಗಿ 2016-17ನೇ ಸಾಲಿನಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ರಾಜ್ಯಕ್ಕೆ 1600 ಕೋಟಿ ರೂ. (ರಾಜ್ಯದ ಪಾಲು ಶೇ.10 ಸೇರಿ) ಹೆಚ್ಚುವರಿಯಾಗಿ ಲಭ್ಯವಾಗಲಿದೆ ಎಂದರು.

2016-17ನೇ ಸಾಲಿಗೆ ಈ ಹಿಂದೆ 6.02 ಕೋಟಿ ಕೆಲಸದ ದಿನಗಳನ್ನು ನೀಡಿದ್ದ ಕೇಂದ್ರ ಸರ್ಕಾರ ಅದಕ್ಕಾಗಿ 2400 ಕೋಟಿ ರೂ. (ರಾಜ್ಯದ ಪಾಲು ಶೇ.10 ಸೇರಿ) ಅನುದಾನ ನಿಗದಿಪಡಿಸಿತ್ತು. ಇದೀಗ ಕೆಲಸದ ದಿನಗಳನ್ನು 10 ಕೋಟಿಗೆ ಹೆಚ್ಚಿಸಿರುವುದರಿಂದ ಒಟ್ಟು 4,000 ಕೋಟಿ ರೂ. ರಾಜ್ಯಕ್ಕೆ ಲಭ್ಯವಾಗಲಿದೆ. ಈ ಪೈಕಿ ಕೇಂದ್ರ ಸರ್ಕಾರ 3,543 ಕೋಟಿ ರೂ. ನೀಡಿದರೆ ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸುತ್ತದೆ ಎಂದರು.

ಉದ್ಯೋಗ ಖಾತರಿಗಾಗಿ ಕೇಂದ್ರ ಸರ್ಕಾರ ಇದುವರೆಗೆ 1220 ಕೋಟಿ ರೂ. ಬಿಡುಗಡೆ ಮಾಡಿದ್ದರೆ, ರಾಜ್ಯ ಸರ್ಕಾರ ತನ್ನ ಶೇ. 10ರಷ್ಟು ಪಾಲು ಮತ್ತು ಹೆಚ್ಚುವರಿಯಾಗಿ 800 ಕೋಟಿ ರೂ. ಸೇರಿ ಒಟ್ಟಾರೆ 1120 ಕೋಟಿ ರೂ. ಬಿಡುಗಡೆ ಮಾಡಿದೆ. ಈ 800 ಕೋಟಿ ರೂ. ಇನ್ನಷ್ಟೇ ಕೇಂದ್ರ ಸರ್ಕಾರದಿಂದ ಬರಬೇಕಾಗಿದೆ ಎಂದು ತಿಳಿಸಿದರು.

Advertisement

ಶೆಟ್ಟರ್‌ಗೆ ತಿರುಗೇಟು:
ಉದ್ಯೋಗ ಖಾತರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ನಿಗದಿತ ಅವಧಿಯಲ್ಲಿ ಹಣ ಬಿಡುಗಡೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫ‌ಲವಾಗಿದೆ ಎಂಬ ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ್‌ ಶೆಟ್ಟರ್‌ ಟೀಕೆಗೆ ಪ್ರತಿಕ್ರಿಯಿಸಿದ ಸಚಿವರು, ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದಾಗ ಕೂಲಿ ಕಾರ್ಮಿಕರಿಗೆ ಸರಾಸರಿ 33 ದಿನಗಳಲ್ಲಿ ಕೂಲಿ ಹಣ ನೀಡಲಾಗುತ್ತಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 17 ದಿನಗಳೊಳಗೆ ಕೂಲಿ ಹಣ ನೀಡಲಾಗುತ್ತಿದೆ. ಅಲ್ಲದೆ, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದೇ ಇದ್ದರೂ ರಾಜ್ಯ ಸರ್ಕಾರವೇ ಹೆಚ್ಚುವರಿಯಾಗಿ 800 ಕೋಟಿ ರೂ. ನೀಡಿ ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದೆ. ಇದಕ್ಕೆ ಅಭಿನಂದಿಸಿ, ಶೀಘ್ರ ಹಣ ಬಿಡುಗಡೆ ಮಾಡುವಂತೆ ಕೇಂದ್ರದ ಮೇಲೆ ಒತ್ತಡ ಹೇರುವ ಬದಲು ಟೀಕೆ ಮಾಡುತ್ತಿರುವ ಅವರಿಗೆ ಏನು ಉತ್ತರಿಸಬೇಕು ಎಂದು ಪ್ರಶ್ನೆ ಮಾಡಿದರು.

ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಅಧಿನಿಯಮ:
ಗ್ರಾಮೀಣಾಭಿವೃದ್ಧಿ ಕುರಿತಂತೆ ರಾಜ್ಯ ಸರ್ಕಾರ ಹೊಸದಾಗಿ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ರಾಜ್‌ ಕಾಯ್ದೆ ರೂಪಿಸಿದ್ದು, ಇದಕ್ಕಾಗಿ 60 ನಿಯಮಾವಳಿಗಳನ್ನು ಸಿದ್ಧಪಡಿಸಬೇಕಿದೆ. 100 ದಿನಗಳಲ್ಲಿ ಈ ಕಾರ್ಯ ಮುಗಿಸುವುದಾಗಿ ಡಿಸೆಂಬರ್‌ನಲ್ಲಿ ಹೇಳಲಾಗಿತ್ತು. ಅದರಂತೆ 31 ನಿಯಮಗಳನ್ನು ಅಂತಿಮಗೊಳಿಸಿ ಜಾರಿ ಮಾಡಿದ್ದು, ಇನ್ನುಳಿದ 29 ನಿಯಮಗಳನ್ನು ಅಂತಿಮಗೊಳಿಸುವ ಕೆಲಸ ನಡೆಯುತ್ತಿದೆ. ಆ ಪೈಕಿ 15 ನಿಯಮಗಳ ಕುರಿತು ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತಿದ್ದು, ಇನ್ನುಳಿದ 14 ನಿಯಮಗಳ ಬಗ್ಗೆ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಆಹ್ವಾನಿಸಲಾಗಿದೆ. ನಿಗದಿತ 100 ದಿನಗಳಲ್ಲಿ ಎಲ್ಲಾ 60 ನಿಯಮಾವಳಿಗಳನ್ನು ಜಾರಿಗೊಳಿಸಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next