Advertisement

ಸೆಪ್ಟಂಬರ್‌ ಅಂತ್ಯದೊಳಗೆ 1 ಸಾವಿರ ಚಾರ್ಜಿಂಗ್‌ ಸೆಂಟರ್‌: ಸಚಿವ ಸುನಿಲ್‌

12:02 AM May 18, 2022 | Team Udayavani |

ಬಂಟ್ವಾಳ: ಜೂನ್‌ ಮೊದಲ ವಾರದಿಂದ ರಾಜ್ಯಾದ್ಯಂತ ವಾಹನಗಳ ಬ್ಯಾಟರಿ ಚಾರ್ಜಿಂಗ್‌ ಸೆಂಟರ್‌ ಅಭಿಯಾನ ನಡೆಯಲಿದ್ದು, ಮೂರ್‍ನಾಲ್ಕು ತಿಂಗಳಲ್ಲಿ 1 ಸಾವಿರ ಕೇಂದ್ರಗಳನ್ನು ಆರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಇಂಧನ ಖಾತೆ ಸಚಿವ ವಿ. ಸುನಿಲ್‌ ಕುಮಾರ್‌ ಹೇಳಿದರು.

Advertisement

ಅವರು ಮಂಗಳವಾರ ಬಂಟ್ವಾಳದ ವಿದ್ಯಾಗಿರಿಯ ಬಳಿಯ ಅರ್ಬಿಗುಡ್ಡೆಯಲ್ಲಿ ಮೆಸ್ಕಾಂನಿಂದ ಅನುಷ್ಠಾನ ಗೊಂಡಿರುವ 11.98 ಕೋ.ರೂ. ವೆಚ್ಚದ ಗ್ಯಾಸ್‌ ಇನ್ಸು ಲೇಟೆಡ್‌ (ಜಿಐ) ವಿದ್ಯುತ್‌ ಉಪ ಕೇಂದ್ರ ವನ್ನು ಉದ್ಘಾಟಿಸಿ ಪತ್ರಕರ್ತರ ಜತೆ ಮಾತನಾಡಿದರು.

5,020 ಮೆಗಾವ್ಯಾಟ್‌ ಉತ್ಪಾದನೆ
ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಾಗ ದಂತೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಯಚೂರು, ಬಳ್ಳಾರಿಯ ಎಲ್ಲ ಯೂನಿಟ್‌ಗಳು ಕೂಡ ಕಾರ್ಯಾರಂಭ ಮಾಡಿವೆ. ಹಿಂದೆ ಪ್ರತೀ ಸಂದರ್ಭದಲ್ಲಿ 3, 6 ಯೂನಿಟ್‌ಗಳು ಸ್ಥಗಿತಗೊಳ್ಳುತ್ತಿದ್ದವು. ಕಳೆದ 7 ವರ್ಷಗಳಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ 5,020 ಮೆಗಾವ್ಯಾಟ್‌ ಉತ್ಪಾದನೆ ಮಾಡಿದ್ದು, ಕಲ್ಲಿದ್ದಲು ನಿರಂತರ ಸರಬರಾಜು ಇದ್ದ ಕಾರಣ ಇದು ಸಾಧ್ಯವಾಗಿದೆ. ಜತೆಗೆ ಅಧಿಕಾರಿಗಳು ಚೆನ್ನಾಗಿ ನಿರ್ವಹಣೆ ಮಾಡಿದ್ದಾರೆ ಎಂದರು.

ಪವರ್‌ಮನ್‌ಗಳ ನೇಮಕ
ಹೆಚ್ಚುವರಿ ಪವರ್‌ಮನ್‌ಗಳ ನೇಮ ಕಾತಿ ಪ್ರಕ್ರಿಯೆ ಆರಂಭಿಸಿದ್ದು, 899 ಹೊಸ ನೇಮಕಾತಿ ನಡೆದಿದೆ. ಮೆಸ್ಕಾಂನಲ್ಲೇ 600ಕ್ಕೂ ಅಧಿಕ ಪವರ್‌ಮನ್‌ಗಳ ನೇಮಕವಾಗಿದೆ. ಹುದ್ದೆ ಭರ್ತಿಯ ದೃಷ್ಟಿಯಿಂದ 1,500 ಮಂದಿಯ ನೇಮಕಾತಿಗಾಗಿ ಕೆಪಿಟಿಸಿಎಲ್‌ ಮೂಲಕ ಅರ್ಜಿ ಆಹ್ವಾನಿಸಿದ್ದು, ಜೂನ್‌ನಲ್ಲಿ ಪರೀಕ್ಷೆ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಪವರ್‌ಮನ್‌ಗಳಿಗೆ ಅವಘಡದ ಸಂದರ್ಭ ನೀಡುವ ವಿಮೆಯ ಮೊತ್ತವನ್ನು 20 ಲಕ್ಷ ರೂ.ಗಳಿಂದ 40 ಲಕ್ಷ ರೂ.ಗಳಿಗೆ ಏರಿಸಲಾಗಿದೆ ಎಂದರು.

ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು, ವಿಧಾನ ಪರಿಷತ್‌ ಸದಸ್ಯ ಪ್ರತಾಪ್‌ಸಿಂಹ ನಾಯಕ್‌, ಕಿಯೋನಿಕ್ಸ್‌ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ದಿ ಮೈಸೂರ್‌ ಎಲೆಕ್ಟ್ರಿಕಲ್‌ ಇಂಡಸ್ಟ್ರೀಸ್‌ ಲಿ. ಅಧ್ಯಕ್ಷ ಸಂತೋಷ್‌ ಕುಮಾರ್‌ ರೈ, ಬುಡಾ ಅಧ್ಯಕ್ಷ ಬಿ. ದೇವದಾಸ್‌ ಶೆಟ್ಟಿ, ದ.ಕ. ಜಿ.ಪಂ. ಸಿಇಒ ಡಾ| ಕುಮಾರ್‌, ಮೆಸ್ಕಾಂ ಎಂಡಿ ಪ್ರಶಾಂತ್‌ ಕುಮಾರ್‌ ಮಿಶ್ರ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next