ನವದೆಹಲಿ: ಕೇಂದ್ರದ ನೂತನ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಗಣರಾಜ್ಯೋತ್ಸವ ದಿನಾಚರಣೆ(ಜನವರಿ 26, 2021) ನಡೆಸುತ್ತಿರುವ ಟ್ರ್ಯಾಕ್ಟರ್ ರಾಲಿ ಹಿಂಸಾರೂಪಕ್ಕೆ ತಿರುಗಿದ್ದು, ಈ ಸಂದರ್ಭದಲ್ಲಿ ಟ್ರ್ಯಾಕ್ಟರ್ ಉರುಳಿಬಿದ್ದು ರೈತನೊಬ್ಬ ಸಾವನ್ನಪ್ಪಿರುವ ಘಟನೆ ದೀನ್ ದಯಾಳ್ ಉಪಾಧ್ಯಾಯ್ (ಡಿಡಿಯು) ರಸ್ತೆಯಲ್ಲಿ ಸಂಭವಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕೆಂಪುಕೋಟೆಗೆ ನುಗ್ಗಿದ ರೈತರು: ಪ್ರಧಾನಿ ಧ್ವಜಾರೋಹಣ ಮಾಡುವ ಸ್ಥಳದಲ್ಲಿ ರೈತರಿಂದ ಧ್ವಜಾರೋಹಣ!
ದೆಹಲಿಯ ಸಿಂಘು ಹಾಗೂ ಟಿಖ್ರಿ ಗಡಿಯಿಂದ ಟ್ರ್ಯಾಕ್ಟರ್ ಮೂಲಕ ಹೊರಟಿದ್ದ ರೈತರು ವಿವಿಧ ಮಾರ್ಗಗಳಿಂದ ದೆಹಲಿಯೊಳಕ್ಕೆ ನುಗ್ಗಲು ಯತ್ನಿಸಿದ ಪರಿಣಾಮ ಪೊಲೀಸರು ಮತ್ತು ರೈತರ ನಡುವೆ ಘರ್ಷಣೆ ನಡೆದಿತ್ತು. ಘಟನೆಯಲ್ಲಿ ಹಲವಾರು ಪೊಲೀಸರು ಗಾಯಗೊಂಡಿದ್ದರು.
ಪೊಲೀಸರು ಕೂಡಾ ಪ್ರತಿಭಟನಾಕಾರರನ್ನು ತಡೆಯಲು ಲಾಠಿಚಾರ್ಜ್, ಅಶ್ರುವಾಯು ಸಿಡಿಸಿದರೂ ಕೂಡಾ ಯಾವುದಕ್ಕೂ ಬಗ್ಗದ ಪರಿಣಾಮ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಂಜಾಗ್ರತಾ ಕ್ರಮದ ಹಿನ್ನೆಲೆಯಲ್ಲಿ ದೆಹಲಿಯೊಳಕ್ಕೆ ಪ್ರವೇಶಿಸಲು ಇರುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಿದ್ದು, ಯಾವುದೇ ವಾಹನಗಳಿಗೂ ಒಳಬರಲು ಅನುಮತಿ ನೀಡುತ್ತಿಲ್ಲ ಎಂದು ವರದಿ ತಿಳಿಸಿದೆ.
ರಾಜಪಥ್ ನಲ್ಲಿ ಗಣರಾಜ್ಯೋತ್ಸವ ಪರೇಡ್ ಅಂತ್ಯಗೊಂಡ ಬೆನ್ನಲ್ಲೇ ಟ್ರ್ಯಾಕ್ಟರ್ ರಾಲಿಗೆ ಅನುಮತಿ ನೀಡುವುದಾಗಿ ಪೊಲೀಸರು ರೈತರಿಗೆ ಮನವರಿಕೆ ಮಾಡಲು ಯತ್ನಿಸಿದರೂ ಕೂಡಾ ರೈತರು ಬಲವಂತದಿಂದ ಬ್ಯಾರಿಕೇಡ್ ಕಿತ್ತೆಸೆದು ಒಳನುಗ್ಗಿದ್ದರು. ಇದರಿಂದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿರುವುದಾಗಿ ವರದಿ ತಿಳಿಸಿದೆ.
ಕೆಂಪುಕೋಟೆಗೆ ನುಗ್ಗಿ ಧ್ವಜಹಾರಿಸಿದ ರೈತರು:
ಆಕ್ರೋಶಗೊಂಡ ರೈತರು ಲಾಠಿಚಾರ್ಜ್ ಅಶ್ರುವಾಯು ಪ್ರಯೋಗಕ್ಕೆ ಜಗ್ಗದೇ ಟ್ರ್ಯಾಕ್ಟರ್ ಮೂಲಕ ಕೆಂಪು ಕೋಟೆಗೆ ನುಗ್ಗಿದ ರೈತರು ಪ್ರಧಾನಿ ನರೇಂದ್ರ ಮೋದಿ ಧ್ವಜಾರೋಹಣ ನೆರವೇರಿಸುವ ಸ್ಥಳದಲ್ಲಿ ರೈತ ಸಂಘಟನೆಯ ಧ್ವಜಗಳನ್ನು ಹಾರಿಸಿರುವ ಘಟನೆ ನಡೆದಿದೆ.