ಕಲಬುರಗಿ: ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ಏ. 1ರಂದು ನಗರ ಹಾಗೂ ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಂಭ್ರಮ-ಸಡಗರದಿಂದ ಆಚರಿಸಲು ಶಿಷ್ಟಾಚಾರ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ್ ಅಧ್ಯಕ್ಷತೆಯಲ್ಲಿ ಗುರುವಾರ ನಗರದಲ್ಲಿ ನಡೆದ ಸಭೆಯು ಸರ್ವಾನುಮತದಿಂದ ನಿರ್ಣಯ ಕೈಗೊಂಡಿತು.
ಅಂದು ದೇವರ ದಾಸಿಮಯ್ಯ ಜಯಂತಿ ಸಮಾರಂಭವನ್ನು ಮಧ್ಯಾಹ್ನ 12:00 ಗಂಟೆಗೆ ಡಾ| ಎಸ್. ಎಂ. ಪಂಡಿತ ರಂಗಮಂದಿರದಲ್ಲಿ ಆಚರಿಸಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡುವರು ಎಂದು ಸಭೆ ನಿರ್ಣಯ ಕೈಗೊಂಡಿತು.
ಸಮಾರಂಭವನ್ನು ಗುಳೇದಗುಡ್ಡದ ಪೂಜ್ಯ ಡಾ| ಬಸವರಾಜಪ್ಪ ಸಾನ್ನಿಧ್ಯದಲ್ಲಿ ನಡೆಸಲು ಹಾಗೂ ಸಮಾರಂಭದ ಅಂಗವಾಗಿ ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜೀವನ ಮತ್ತು ಸಾಧನೆ ಕುರಿತು ರಮೇಶ ಮಾಳಾ ಅವರಿಂದ ವಿಶೇಷ ಉಪನ್ಯಾಸ, ಕಲಾವಿದರಿಂದ ವಚನ ಗಾಯನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆ ತೀರ್ಮಾನಿಸಿತು.
ಜಯಂತಿ ಆಚರಣೆ ಅಂಗವಾಗಿ ನಂತರ ದೇವರ ದಾಸಿಮಯ್ಯ ಭಾವಚಿತ್ರದ ಬೃಹತ್ ಮೆರವಣಿಗೆಯನ್ನು ಬೆಳಗ್ಗೆ 9:00 ಗಂಟೆಗೆ ಮಕ್ತಂಪುರದ ದೇವರ ದಾಸಿಮಯ್ಯ ದೇವಸ್ಥಾನದದಿಂದ ಸರಾಫ್ ಬಜಾರ್, ಬಟ್ಟೆ ಮಾರ್ಕೆಟ್, ಚೌಕ್ ಪೊಲೀಸ್ ಸ್ಟೇಶನ್, ಸೂಪರ್ ಮಾರ್ಕೆಟ್, ಜಗತ್ ವೃತ್ತದ ಮೂಲಕ ಡಾ| ಎಸ್.ಎಂ. ಪಂಡಿತ ರಂಗಮಂದಿರ ವರೆಗೆ ಸಮಾಜದಿಂದ ಆಯೋಜಿಸಲು ಸಭೆ ನಿರ್ಣಯ ಕೈಗೊಂಡಿತು.
ಜನ್ಮದಿನಾಚರಣೆಗೆ ಸಂಬಂಧಿಸಿದಂತೆ ಆಹ್ವಾನ ಪತ್ರ, ವೇದಿಕೆ, ಮೆರವಣಿಗೆಯಲ್ಲಿ ಡೊಳ್ಳು ಮತ್ತು ಹಲಗೆ ವಾದನ ಕಲಾ ತಂಡಗಳ, ಕುಡಿಯುವ ನೀರಿನ, ಸೂಕ್ತ ಪೊಲೀಸ್ ಬಂದೋಬಸ್ತ್ ಮುಂತಾದವುಗಳ ವ್ಯವಸ್ಥೆಯನ್ನು ಸಂಬಂಧಿಸಿದ ಅಧಿಕಾರಿಗಳು ಮಾಡಬೇಕೆಂದು ಪ್ರಕಾಶ ಚಿಂಚೋಳಿಕರ್ ಸೂಚಿಸಿದರು.
ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಜಯಂತಿಯನ್ನು ಆಚರಿಸುವಂತೆ ಎಲ್ಲ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು.
ಜಯಂತಿ ಕಾರ್ಯಕ್ರಮಕ್ಕೆ ಜಿಲ್ಲೆಗೆ ಒಟ್ಟು 2.25 ಲಕ್ಷ ರೂ. ಬಿಡುಗಡೆಯಾಗಿದ್ದು, ಜಿಲ್ಲೆಯ ಆರು ತಾಲೂಕುಗಳ ಜಯಂತಿ ಕಾರ್ಯಕ್ರಮಕ್ಕೆ ತಲಾ 25 ಸಾವಿರ ರೂ. ಮತ್ತು ಜಿಲ್ಲಾ ಕೇಂದ್ರದ ಜಯಂತಿ ಕಾರ್ಯಕ್ರಮಕ್ಕೆ 75 ಸಾವಿರ ರೂ. ವಿನಿಯೋಗಿಸಲಾಗುವುದು ಎಂದು ತಿಳಿಸಿದರು.
ನೇಕಾರರ ಒಕ್ಕೂಟ ಮತ್ತು ಸಂಘಗಳ ವಿವಿಧ ಪದಾಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಚರ್ಚೆಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಜಗದೀಶ್ವರಿ ಶಿವಕೇರಿ ಜಯಂತಿ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದರು.