ಶ್ರೀನಗರ: ಜಮ್ಮು ಜಿಲ್ಲೆಯ ನಾಗ್ರೋಟಾ ಟೋಲ್ ಪ್ಲಾಜಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಹೊಡೆದುರುಳಿಸಲಾಗಿದೆ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿಗೆ ಗುಂಡಿನ ದಾಳಿಯಲ್ಲಿ ಗಾಯಗೊಂಡಿದ್ದಾರೆ.
ಶುಕ್ರವಾರ ಮುಂಜಾನೆ ನಡೆದ ಈ ದಾಳಿಯಲ್ಲಿ ಓರ್ವ ಉಗ್ರನನ್ನು ಹತ್ಯೆ ಮಾಡಲಾಗಿದೆ. ಉಳಿದ ಉಗ್ರರನ್ನು ಸದೆ ಬಡೆಯಲು ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆಳಿಗ್ಗೆ 5 ಗಂಟೆ ಸುಮಾರಿಗೆ ನಾಲ್ವರು ಪೊಲೀಸರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಆರಂಭಿಸಿದರು. ಇದರಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಭದ್ರತಾ ಪಡೆಗಳು ಕೂಡಲೇ ಸ್ಥಳವನ್ನು ಸುತ್ತುವರಿದು ಕಾರ್ಯಾಚರಣೆ ಆರಂಭಿಸಿವೆ ಎಂದು ಸಿಆರ್ ಪಿಎಫ್ ವಕ್ತಾರ ಶಿವನಂದನ್ ಹೇಳಿಕೆ ನೀಡಿದ್ದಾರೆ.
ಸಿಆರ್ ಪಿಎಫ್ ಜವಾನರು ಮತ್ತು ಜಮ್ಮು ಕಾಶ್ಮೀರ ಪೊಲೀಸರು ಜಂಟಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಹೆಚ್ಚುವರಿ ಪಡೆಗಳನ್ನು ಸ್ಥಳಕ್ಕೆ ಕಳುಹಿಸಿಕೊಡಲಾಗಿದೆ. ರಸ್ತೆ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿಲಾಗಿದೆ.
ಆರ್ಟಿಕಲ್ 370 ರದ್ದತಿಯ ನಂತರ ಇದೇ ಮೊದಲ ಬಾರಿಗೆ ಜಮ್ಮುವಿನಲ್ಲಿ ಉಗ್ರರ ಗುಂಡಿನ ಮೊರೆತ ಕೇಳಿಸಿದೆ.