ವಾಷಿಂಗ್ಟನ್:ಕೋವಿಡ್ 19 ಸೋಂಕಿನ ಪರಿಣಾಮದಿಂದ ಜಾಗತಿಕವಾಗಿ 1.5 ಮಿಲಿಯನ್ (15 ಲಕ್ಷ)ಗಿಂತಲೂ ಅಧಿಕ ಮಕ್ಕಳು ಕನಿಷ್ಠ ಒಂದು ಪೋಷಕರು ಅಥವಾ ಅಜ್ಜ, ಅಜ್ಜಿಯನ್ನು ಕಳೆದುಕೊಂಡಿದ್ದು, ಭಾರತದಲ್ಲಿಯೇ 1,19,000 ಮಕ್ಕಳು ಪೋಷಕರಿಲ್ಲದೆ ಅನಾಥರಾಗಿರುವುದಾಗಿ ದ ಲ್ಯಾನ್ಸೆಟ್ ಬಿಡುಗಡೆಗೊಳಿಸಿರುವ ನೂತನ ಅಧ್ಯಯನ ವರದಿಯಲ್ಲಿ ತಿಳಿಸಿದೆ.
ಕೋವಿಡ್ ಸೋಂಕಿನ ಮೊದಲ 14 ತಿಂಗಳಲ್ಲಿ ಹತ್ತು ಲಕ್ಷಕ್ಕೂ ಅಧಿಕ ಮಕ್ಕಳು ಒಂದು ಅಥವಾ ಇಬ್ಬರು ಪೋಷಕರನ್ನು ಕಳೆದುಕೊಂಡಿದ್ದಾರೆ. ಇನ್ನುಳಿದ 5 ಲಕ್ಷ ಮಕ್ಕಳು ತಮ್ಮ ಅಜ್ಜ, ಅಜ್ಜಿಯನ್ನು ಕಳೆದುಕೊಂಡಿರವುದಾಗಿ ಅಧ್ಯಯನದಲ್ಲಿ ಅಂದಾಜಿಸಲಾಗಿದೆ ಎಂದು ವರದಿ ಹೇಳಿದೆ.
2020ರ ಮಾರ್ಚ್ 1ರಿಂದ 2021ರ ಏಪ್ರಿಲ್ 30ರವರೆಗೆ ಪ್ರಾಣಕಳೆದುಕೊಂಡಿರುವ 15 ಲಕ್ಷ ಮಕ್ಕಳಲ್ಲಿ, 11,34,000 ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡಿರುವುದಾಗಿ ಲ್ಯಾನ್ಸೆಟ್ ವರದಿ ವಿವರಿಸಿದೆ.
ಭಾರತ:
ಅಧ್ಯಯನ ವರದಿ ಪ್ರಕಾರ, ಕೋವಿಡ್ 19 ಸೋಂಕಿನಿಂದ ಭಾರತದಲ್ಲಿ 25,500 ಮಕ್ಕಳು ತಮ್ಮ ತಾಯಿಯನ್ನು ಕಳೆದುಕೊಂಡಿದ್ದರೆ, 90,751 ಮಕ್ಕಳು ತಮ್ಮ ತಂದೆಯನ್ನು ಕಳೆದುಕೊಂಡಿದ್ದಾರೆ. ಮತ್ತು 12 ಮಕ್ಕಳು ಇಬ್ಬರೂ ಪೋಷಕರನ್ನು ಕಳೆದುಕೊಂಡಿರುವುದಾಗಿ ತಿಳಿಸಿದೆ.
ಜಾಗತಿಕವಾಗಿ 11,34,000 ಮಕ್ಕಳು ತಮ್ಮ ಪೋಷಕರು ಅಥವಾ ಅಜ್ಜ, ಅಜ್ಜಿಯನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ 10,42,000 ಮಕ್ಕಳು ತಮ್ಮ ತಾಯಿ, ತಂದೆ ಅಥವಾ ಇಬ್ಬರನ್ನೂ ಕಳೆದುಕೊಂಡಿರುವುದಾಗಿ ವರದಿ ತಿಳಿಸಿದೆ.