Advertisement

ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳ ಮೇಲ್ದರ್ಜೆಗೆ 1.22 ಲಕ್ಷಕೋಟಿ ಹೂಡಿಕೆ: ಜೋಶಿ

04:18 PM Sep 02, 2020 | Suhan S |

ಹುಬ್ಬಳ್ಳಿ: ಭಾರತವನ್ನು ಕಲ್ಲಿದ್ದಲಿನಲ್ಲಿ ಆತ್ಮನಿರ್ಭರವನ್ನಾಗಿ ಮಾಡುವುದು ಹಾಗೂ 2023-24 ರೊಳಗೆ 1 ಬಿಲಿಯನ್‌ ಟನ್‌ ಕಲ್ಲಿದ್ದಲು ಉತ್ಪಾದಿಸುವ ಉದ್ದೇಶದಿಂದ ಕೋಲ್‌ ಇಂಡಿಯಾ ಲಿ. ವತಿಯಿಂದ ಕಲ್ಲಿದ್ದಲು ಸ್ಥಳಾಂತರ, ಮೂಲ ಸೌಲಭ್ಯ, ಯೋಜನಾ ಅಭಿವೃದ್ಧಿ, ಶೋಧನೆ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳ ಮೇಲ್ದರ್ಜೆಗೇರಿಸುವ ಕಾರ್ಯ ನಡೆಯಲಿದ್ದು, ಇದಕ್ಕಾಗಿ 1.22 ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

Advertisement

ಮಂಗಳವಾರ ನವದೆಹಲಿಯಲ್ಲಿ ಕೋಲ್‌ ಇಂಡಿಯಾ ಲಿ. ಆಯೋಜಿಸಿದ್ದ ಪಾಲುದಾರರ ಸಭೆಯ ವಿಡಿಯೋ ಸಂವಾದದಲ್ಲಿ ಮಾತನಾಡಿದ ಅವರು, ಈ ಎಲ್ಲಾ ಕಾರ್ಯಗಳಿಗೆ ಸುಮಾರು 500 ಯೋಜನೆಗಳಲ್ಲಿ 1.22ಲಕ್ಷ ಕೋಟಿ ರೂ. ಹೂಡಿಕೆ ಮಾಡಲಿದೆ. ಕಂಪನಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಎಲ್ಲ ಪಾಲುದಾರರ ತೊಡಗಿಸಿಕೊಳ್ಳುವಿಕೆ ಮತ್ತು ಒಳಗೊಳ್ಳುವಿಕೆಯಿಂದ ಯೋಜನೆಯ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದರು.

ಕಲ್ಲಿದ್ದನ್ನು ತಡೆಗಯುವ ಸ್ಥಳದಿಂದ ರವಾನೆ ಕೇಂದ್ರಗಳಿಗೆ ಸಾಗಿಸುವ ಯೋಜನೆಗಳಿಗಾಗಿ ಮೊದಲ ಹಂತದಲ್ಲಿ ಕೋಲ್‌ ಇಂಡಿಯಾ 14,200 ಕೋಟಿ ರೂ ಹೂಡಿಕೆ ಮಾಡಲಿದೆ. ಸಾರಿಗೆಯಲ್ಲಿ ಸುಧಾರಿತ ದಕ್ಷತೆ ತರಲು ಮತ್ತು ಈ ಎರಡೂ ಸ್ಥಳಗಳ ನಡುವೆ ಈಗಿರುವ ರಸ್ತೆ ಸಾರಿಗೆಯ ಬದಲಿಗೆ ಕಂಪ್ಯೂಟರ್‌-ನೆರವಿನ ಲೋಡಿಂಗ್‌ ಕೈಗೊಳ್ಳಲು ಇದನ್ನು ಮಾಡಲಾಗುತ್ತಿದೆ. ಉದ್ದೇಶಿತ 1.22 ಲಕ್ಷ ಕೋಟಿ ರೂ. ವೆಚ್ಚದಲ್ಲಿ, ಸಿಐಎಲ್‌ 2023-24ರ ಹೊತ್ತಿಗೆ ಕಲ್ಲಿದ್ದಲು ಸ್ಥಳಾಂತರಿಸುವಿಕೆಗೆ 32,696 ಕೋಟಿ ರೂ., ಗಣಿ ಮೂಲಸೌಕರ್ಯಕ್ಕೆ 25,117 ಕೋಟಿ ರೂ., ಯೋಜನಾ ಅಭಿವೃದ್ಧಿಗೆ, 29,461 ಕೋಟಿ ರೂ., ವೈವಿಧೀಕರಣ ಮತ್ತು ಶುದ್ಧ ಕಲ್ಲಿದ್ದಲು ತಂತ್ರಜ್ಞಾನಗಳ ಮೇಲೆ 32,199 ರೂ., ಸಾಮಾಜಿಕ ಮೂಲಸೌಕರ್ಯಕ್ಕೆ 1,495 ಕೋಟಿ ರೂ, ಮತ್ತು ಶೋಧನೆ ಕಾರ್ಯಗಳಿಗೆ 1,893 ಕೋಟಿ ರೂ. ವೆಚ್ಚ ಮಾಡಲಿದೆ ಎಂದು ಅವರು ಹೇಳಿದರು.

ಮುಂದಿನ ವರ್ಷಗಳಲ್ಲಿ ಕಲ್ಲಿದ್ದಲು ಉತ್ಪಾದನೆ ಹೆಚ್ಚಿಸುವ ಮತ್ತು ಕಲ್ಲಿದ್ದಲು ಆಮದು ಅವಲಂಬನೆ ಕಡಿಮೆ ಮಾಡುವ ಯೋಜನೆಯಲ್ಲಿ, ಗಣಿ ಅಭಿವೃದ್ಧಿ ಮತ್ತು ನಿರ್ವಾಹಕರು (ಎಂಡಿಒ) ಮಾದರಿಯಲ್ಲಿ ಕಾರ್ಯ ನಿರ್ವಹಿಸಬೇಕು. ಇದಕ್ಕಾಗಿ ಕೋಲ್‌ ಇಂಡಿಯಾ ಒಟ್ಟು 15 ಗ್ರೀನ್‌ ಫೀಲ್ಡ್ ಯೋಜನೆಗಳನ್ನು ಗುರುತಿಸಿದೆ, ಅದು ಒಟ್ಟು ಸುಮಾರು 34,600 ಕೋಟಿ ರೂ. ಹೂಡಿಕೆಯನ್ನು ಒಳಗೊಂಡಿರುತ್ತದೆ. ಕೋಲ್‌ ಇಂಡಿಯಾ ಮತ್ತು ಅದರ ಅಂಗ ಸಂಸ್ಥೆಗಳು ವಾರ್ಷಿಕವಾಗಿ 30,000 ಕೋಟಿ ರೂ. ಗಳ ವಿವಿಧ ರೀತಿಯ ಸರಕು, ಕಾಮಗಾರಿ ಮತ್ತು ಸೇವೆಗಳನ್ನು ಖರೀದಿಸುತ್ತವೆ ಎಂದು ಸಚಿವರು ಹೇಳಿದರು. ಕಲ್ಲಿದ್ದಲು ಕಾರ್ಯದರ್ಶಿ ಅನಿಲ್‌ ಕುಮಾರ್‌ ಜೈನ್‌, ಕೋಲ್‌ ಇಂಡಿಯಾದ ಸಿಎಂಡಿ ಪ್ರಮೋದ್‌ ಅಗರ್ವಾಲ್‌, ಕಲ್ಲಿದ್ದಲು ಸಚಿವಾಲಯ ಮತ್ತು ಕೋಲ್‌ ಇಂಡಿಯಾದ ಇತರೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಪಾಲುದಾರರೊಂದಿಗೆ ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next