ಬೆಂಗಳೂರು: ಸರಕಳವು, ಮನೆಗಳವಿನ 68 ಪ್ರಕರಣಗಳನ್ನು ಭೇದಿಸಿರುವ ಪಶ್ಚಿಮ ವಿಭಾಗದ ಪೊಲೀಸರು, 1.18 ಕೋಟಿ ರೂ ಮೌಲ್ಯದ ಮೂರುವರೆ ಕೆ.ಜಿ ಚಿನ್ನಾಭರಣಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ.
ಸೈಯದ್ ಅಬೂಬಕರ್ ಎಂಬ ಕುಖ್ಯಾತ ಸರಗಳ್ಳನನ್ನು ಚಂದ್ರಲೇಔಟ್ ಪೊಲೀಸರು ಬಂಧಿಸಿದ್ದು, ಆತನ ಬಂಧನದಿಂದ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ನಡೆಸಿದ್ದ 57 ಸರಗಳವು ಪ್ರಕರಣಗಳು ಪತ್ತೆಯಾಗಿವೆ. ಆರೋಪಿಯಿಂದ 91 ಲಕ್ಷ ರೂ. ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ವಾಕಿಟಾಕಿಯನ್ನು ಹಿಡಿದು ರಸ್ತೆಯಲ್ಲಿ ಓಡಾಡುತ್ತಿದ್ದು ಪೊಲೀಸ್ ಎಂದು ಹೇಳಿಕೊಂಡು ಮಹಿಳೆಯರಿಗೆ ಸರಬಿಚ್ಚಿಟ್ಟುಕೊಳ್ಳುವಂತೆ ಹೇಳುತ್ತಿದ್ದು. ಬಳಿಕ ಮಹಿಳೆಯರು ಸರ ಬಿಚ್ಚಿಟ್ಟುಕೊಳ್ಳುವಾಗ ಕಿತ್ತುಕೊಂಡು ಪರಾರಿಯಾಗುತ್ತಿದ್ದ.
ಮನೆಕಳವು ಮಾಡುತ್ತಿದ್ದ ಚೆಲುವರಾಯಿ ಎಂಬುವವನ್ನು ಬಂಧಿಸಿ 15.60 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಅದೇ ರೀತಿ ಪ್ರತ್ಯೇಕ ಪ್ರಕರಣಗಳಲ್ಲಿ ಅಮ್ಜದ್ ಹಾಗೂ ಅಕ್ಮಲ್ ಬೇಗಂ ಎಂಬ ಇಬ್ಬರು ಮನೆಕಳ್ಳರ ಬಂಧಿಸಿ, 12 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
274 ಬೈಕ್ ಕಳ್ಳತನ ಮಾಡಿದ್ದ ಕಳ್ಳರ ಬಂಧನ!: ಕಳೆದ ಮೂರು ತಿಂಗಳಿನಿಂದ ಪಶ್ಚಿಮ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಬೈಕ್ ಕಳ್ಳತನ ಮಾಡಿದ್ದ 58 ಮಂದಿ ಆರೋಪಿಗಳನ್ನು ಬಂಧಿಸಿಲಾಗಿದೆ. ಆರೋಪಿಗಳಿಂದ ವಿವಿಧ ಮಾದರಿಯ 93 ಲಕ್ಷ ರೂ. ಬೆಲೆಬಾಳುವ 274 ಬೈಕ್‌ಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.