ರಾಜ್ ಕೋಟ್(ಗುಜರಾತ್): ಹೋಮ್ ವರ್ಕ್ ಮಾಡದ ವಿದ್ಯಾರ್ಥಿಗಳು, ಶಾಲೆಗೆ ಹೋಗಲು ಇಷ್ಟವಿಲ್ಲದ ವಿದ್ಯಾರ್ಥಿಗಳು ಓಡಿ ಹೋಗುವುದು, ಸುಳ್ಳು ಹೇಳಿ ಶಾಲೆಗೆ ಹೋಗದಿರುವ ವಿಚಾರದ ಬಗ್ಗೆ ಕೇಳಿದ್ದೀರಿ. ಆದರೆ ಹತ್ತು ವರ್ಷದ ಪುಟ್ಟ ಬಾಲಕಿಯೊಬ್ಬಳು ಟ್ಯೂಷನ್ ಗೆ ಹೋಗುವುದನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಅಪಹರಣದ ಕಥೆ ಕಟ್ಟಿ ಕೊನೆಗೆ ತಪ್ಪೊಪ್ಪಿಕೊಂಡಿರುವ ಪ್ರಕರಣವೊಂದು ಗುಜರಾತ್ ನ ರಾಜ್ ಕೋಟ್ ನಲ್ಲಿ ನಡೆದಿದೆ.
ಇದನ್ನೂ ಓದಿ:NIA Raids: ಉಗ್ರ ತರಬೇತಿ ಶಂಕೆ… ತಮಿಳುನಾಡು, ತೆಲಂಗಾಣ ಸೇರಿ 30 ಸ್ಥಳಗಳಲ್ಲಿ NIA ದಾಳಿ
ಏನಿದು ಕಿಡ್ನಾಪ್ ಕಥೆ:
ಗುಜರಾತ್ ರಾಜ್ ಕೋಟ್ ನ ಹತ್ತು ವರ್ಷದ ವಿದ್ಯಾರ್ಥಿನಿಯೊಬ್ಬಳು ತನಗೆ ನೀಡಿರುವ ಹೋಮ್ ವರ್ಕ್ ಮಾಡದೇ ಟ್ಯೂಷನ್ ಗೆ ಹೋದರೆ ಟೀಚರ್ ಶಿಕ್ಷೆ ನೀಡುತ್ತಾರೆ ಎಂಬ ಭಯ ಆಕೆಯದ್ದು. ಇದರಿಂದಾಗಿ ಟ್ಯೂಷನ್ ಗೆ ಹೋಗುತ್ತೇನೆ ಎಂದು ತೆರಳಿದ್ದ ವಿದ್ಯಾರ್ಥಿನಿ ಟ್ಯೂಷನ್ ಕ್ಲಾಸ್ ಗೆ ಹೋಗದೇ ಕೆಲ ಸಮಯ ಕಳೆದು ಮನೆಗೆ ಬಂದಿದ್ದಳು. ಆಗ ತಾಯಿ ಬಳಿ, ಯಾರೋ ಮೂರು ಮಂದಿ ಮುಸುಕುಧಾರಿಗಳು ತನ್ನನ್ನು ಕಪ್ಪು ಬಣ್ಣದ ಥಾರ್ ಜೀಪ್ ನಲ್ಲಿ ಕಿಡ್ನಾಪ್ ಮಾಡಿರುವುದಾಗಿ ಹೇಳಿದ್ದಳು.
ಕಪ್ಪು ಬಣ್ಣದ ಥಾರ್ ಜೀಪ್ ಗೆ ನಂಬರ್ ಪ್ಲೇಟ್ ಇಲ್ಲವಾಗಿತ್ತು. ತಾನು ಅಪಹರಣಕಾರರ ತಲೆಗೆ ಕಲ್ಲಿನಿಂದ ಹೊಡೆದು ತಪ್ಪಿಸಿಕೊಂಡು ಬಂದಿರುವುದಾಗಿ ವಿದ್ಯಾರ್ಥಿನಿ ತಾಯಿ ಬಳಿ ಅಲವತ್ತುಕೊಂಡಿದ್ದಳು. ಮಗಳ ಮಾತನ್ನು ಆಲಿಸಿದ ತಾಯಿ ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಕಿಡ್ನಾಪ್ ಆದ ಬಗ್ಗೆ ದೂರು ನೀಡಿದ್ದರು.
ತನಿಖೆಯಲ್ಲಿ ಬಹಿರಂಗವಾಯ್ತು ಅಸಲಿ ಸತ್ಯ:
ವಿದ್ಯಾರ್ಥಿನಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಪಹರಣಕಾರರ ಪತ್ತೆಗಾಗಿ ಶೋಧ ಕಾರ್ಯ ಕೈಗೆತ್ತಿಕೊಂಡಿದ್ದರು. ಕಿಡ್ನಾಪ್ ಆದ ಸಮಯದ ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸಿದ ವೇಳೆ, ವಿದ್ಯಾರ್ಥಿನಿ ಹೇಳಿದ ಸಮಯದಲ್ಲಿ ಯಾವುದೇ ಥಾರ್ ಜೀಪ್ ಕಂಡು ಬಂದಿರಲಿಲ್ಲವಾಗಿತ್ತು. ತಕ್ಷಣವೇ ಜಾಗೃತರಾದ ಪೊಲೀಸರು ವಿದ್ಯಾರ್ಥಿನಿಯನ್ನು ತನಿಖೆಗೆ ಒಳಪಡಿಸಿದ್ದರು. ಆಗ ತಾನು ಟ್ಯೂಷನ್ ಗೆ ಹೋಗುವುದನ್ನು ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ತಾಯಿ ಬಳಿ ಕಿಡ್ನಾಪ್ ಕಥೆ ಕಟ್ಟಿ ಹೇಳಿರುವುದಾಗಿ ತಪ್ಪೊಪ್ಪಿಕೊಂಡಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.