ಡಿ.ಬಿ.ವಡವಡಗಿ
ಮುದ್ದೇಬಿಹಾಳ: ಮೊದಲೇ ಬೆಲೆ ಕುಸಿತದಿಂದ ಕಂಗಾಲಾಗಿರುವ ಗ್ರಾಮೀಣ ಭಾಗದ ಈರುಳ್ಳಿ ಬೆಳೆಗಾರರಿಗೆ ಏಜಂಟರು ಹೆಚ್ಚಿಗೆ ಕಮೀಷನ್ ಪಡೆಯುತ್ತಿರುವುದು, ಎಪಿಎಂಸಿಯಲ್ಲಿ ಈರುಳ್ಳಿ ಖರೀದಿಸುವ ಲೈಸೆನ್ಸ್‌ದಾರರು ಇಲ್ಲದೆ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಮಾರುಕಟ್ಟೆಯಲ್ಲಿರುವ ಕಮೀಷನ್ ಏಜೆಂಟರು ಈರುಳ್ಳಿ ಸವಾಲು ಮಾಡಿದ ಮೇಲೆ ರೂ.100ಕ್ಕೆ ರೂ.10ರಂತೆ ದುಬಾರಿ ಕಮಿಷನ್ ಪಡೆಯುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಈರುಳ್ಳಿ ದರ ಕೆಜಿಗೆ 150-200 ರೂ. ವರೆಗೆ ಏರಿಕೆ ಆಗಿದೆ ಎಂಬ ವಿಷಯವನ್ನು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ತಿಳಿಯುವ ರೈತರು ಲಾಭದ ಆಸೆಯಿಂದ ಈರುಳ್ಳಿ ತಂದರೆ ಏಜಂಟರು ಪ್ಯಾಕೆಟ್ ಲೆಕ್ಕದಲ್ಲೇ ಸವಾಲು ಮಾಡುತ್ತಾರೆ.
ಹುಬ್ಬಳ್ಳಿ, ವಿಜಯಪುರದಂತಹ ದೊಡ್ಡ ನಗರಗಳ ಎಪಿಎಂಸಿಯಲ್ಲಿರುವಂತೆ ಕೆಜಿ ಲೆಕ್ಕದಲ್ಲಿ ಸವಾಲು, ಖರೀದಿ ಪದ್ಧತಿ ಇಲ್ಲಿಲ್ಲ. ಈರುಳ್ಳಿ ಗಡ್ಡೆಗಳನ್ನು ಸಣ್ಣ, ಮಧ್ಯಮ, ದೊಡ್ಡ ಗಾತ್ರವನ್ನಾಗಿ ವಿಭಜಿಸಿ ಸವಾಲು ಮಾಡಲಾಗುತ್ತದೆ. ಪ್ರತಿ ಪಾಕೇಟು ಅಂದಾಜು 50, 60 ಕೆಜಿ ತೂಕ ಇರುತ್ತಿದ್ದು, ರೈತರು ಇಲ್ಲಿನ ಸವಾಲು ಪದ್ಧತಿಗೆ ಒಗ್ಗಿಕೊಳ್ಳುವುದು ಅನಿವಾರ್ಯವಾಗಿದೆ. ಹುಬ್ಬಳ್ಳಿ, ಬೆಂಗಳೂರು, ಸೊಲ್ಲಾಪುರ ಮುಂತಾದ ದೊಡ್ಡ ಮಾರುಕಟ್ಟೆಗೆ ಬೆಳೆ ಒಯ್ದರೆ ಅಲ್ಲಿ ಕೆಜಿ ಲೆಕ್ಕದಲ್ಲಿ ಖರೀದಿಸುತ್ತಾರೆ. ಮೇಲಾಗಿ ಕಮೀಷನ್ ಕೂಡ 100ಕ್ಕೆ ರೂ.2 ರೂ. ಮಾತ್ರ ಪಡೆಯುತ್ತಾರೆ. ಅಲ್ಲಿ ಹೆಚ್ಚಿನ ದರವೂ ದೊರಕುತ್ತದೆ.
ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 150 ಹೆಕ್ಟೇರ್‌ವರೆಗೆ ಈರುಳ್ಳಿ ಬೆಳೆ ರೈತರ ಕೈಗೆ ಬಂದಿದ್ದು, ಇನ್ನೂ ಅಂದಾಜು 300 ಹೆಕ್ಟೇರ್‌ವರೆಗೆ ಬೆಳೆ ಜಮೀನಿನಲ್ಲಿ ಇದೆ. ಮುಂಗಾರು ಹಂಗಾಮಿನಲ್ಲಿ 477 ಹೆಕ್ಟೇರ್‌ನಲ್ಲಿ ಈರುಳ್ಳಿ ಬೆಳೆಯಲಾಗಿದೆ. ಹೆಕ್ಟೇರ್‌ಗೆ ಅಂದಾಜು 20-25 ಕ್ವಿಂಟಲ್ ಇಳುವರಿ ಬರುತ್ತದೆ. ನಾಸಿಕ್ ರೆಡ್, ಉಸಾ ಆಸಂಗಿ, ಲೋಕಲ್ ಬ್ರ್ಯಾಂಡ್ , ತಾವೇ ತಯಾರಿಸಿದ ಬೀಜಗಳನ್ನು ರೈತರು ಬಳಸುತ್ತಾರೆ. ಜಿಂದಾಲ್, ಪಂಚಗಂಗಾ, ಪುಣೆ ಪಸಂಗಿ ಕಂಪನಿಯ ಬೀಜಗಳಿಗೆ ಬೇಡಿಕೆ ಇದೆ. ಬಿಳಿ ಗಡ್ಡಿ, ಕೆಂಪು ಗಡ್ಡಿ ಎಂದು ವಿಭಜಿಸಲಾಗುತ್ತದೆ.
ತಾಲೂಕಿನಲ್ಲಿ ಕೆಂಪು ಗಡ್ಡೆ (ನಾಸಿಕ್ ರೆಡ್)ಗೆ ರೈತರು ಹೆಚ್ಚು ಒಲವು ತೋರಿಸುತ್ತಿದ್ದಾರೆ ಎಂದು ತೋಟಗಾರಿಕೆ ಇಲಾಖೆ ಪ್ರಭಾರಿ ಅಧಿಕಾರಿ ಸಿ.ಬಿ.ಪಾಟೀಲ, ಸಿಬ್ಬಂದಿ ಸುಭಾಶ್ ಟಾಕಳಿ ಉದಯವಾಣಿಗೆ ತಿಳಿಸಿದ್ದಾರೆ.