ಕೊಪ್ಪಳ: ಹಟ್ಟಿ ಚಿನ್ನದ ಗಣಿಯಿಂದ ಹೊರತೆಗೆದ ಬಂಗಾರದಿಂದ ಆಭರಣ ತಯಾರಿಸಿ ಮಾರಾಟ ಮಾಡಲು ನಿರ್ಧರಿಸಲಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.
ಈ ಹಿಂದೆ ಇಲ್ಲಿ ಹೊರತೆಗೆದ ಅದಿರಿನಿಂದ ಬಂಗಾರದ ಗಟ್ಟಿ ಉತ್ಪಾದಿಸಿ ಮಾರಾಟ ಮಾಡಲಾಗುತ್ತಿತ್ತು. ಇನ್ನು ಆದಾಯ ವೃದ್ಧಿಗಾಗಿ ಆಭರಣ ತಯಾರಿಸಲಾಗುತ್ತದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಟ್ಟಿ ಚಿನ್ನದ ಗಣಿ ಸದ್ಯ ಕಲ್ಯಾಣ ಕರ್ನಾಟಕ ಭಾಗಕ್ಕೆ ಮಾತ್ರ ಸೀಮಿತವಾಗಿದೆ. ಇದನ್ನು ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಲು “ಕರ್ನಾಟಕ ಸ್ಟೇಟ್ ಹಟ್ಟಿ ಗೋಲ್ಡ್ ಮೈನ್ಸ್’ ಎಂದು ಮರು ನಾಮಕರಣ ಮಾಡಲು ನಿರ್ಧರಿಸಲಾಗಿದೆ.
ಸಂಸ್ಥೆಯು ಕಳೆದ ವರ್ಷ 1,700 ಕೆ.ಜಿ. ಗಟ್ಟಿ ಬಂಗಾರ ಉತ್ಪಾದಿಸಿ 250 ಕೋ.ರೂ. ಲಾಭಗಳಿಸಿದೆ. ಕಳೆದ 70 ವರ್ಷಗಳಿಂದ ಇಲ್ಲಿ ಬಂಗಾರದ ಗಟ್ಟಿ ಮಾತ್ರ ಉತ್ಪಾದಿಸುತ್ತಿದ್ದಾರೆ. ಆಭರಣಗಳನ್ನಾಗಿ ಮಾಡಿ ಮಾರಾಟ ಮಾಡಿದರೆ ಹೆಚ್ಚಿನ ಲಾಭ ದೊರೆಯಲಿದೆ. ಇದನ್ನೊಂದು ಬ್ರ್ಯಾಂಡ್ ಮಾಡಿದಂತಾಗಲಿದೆ ಎಂದರು.
ಚಿನ್ನದ ಗಣಿಯಿಂದ ವಾರ್ಷಿಕ 5 ಸಾವಿರ ಕೆ.ಜಿ. ಬಂಗಾರ ಉತ್ಪಾದಿಸಲು ಯೋಜನೆ ರೂಪಿಸಲಾಗಿದೆ. ಎರಡು ಹಂತಗಳಲ್ಲಿ 5 ಸಾವಿರ ಕೆ.ಜಿ. ಉತ್ಪಾದನೆಗೆ ಸರಕಾರದಿಂದ ಒಪ್ಪಿಗೆ ಪಡೆಯಲಾಗುವುದು. 371(ಜೆ)ಯಡಿ ಬೇರೆ ದೇಶಗಳಿಗೆ ಇಲ್ಲಿಯ ಜನರನ್ನು ಕಳುಹಿಸಿ ತರಬೇತಿ ಕೊಡಿಸ ಲಾಗುವುದು. ರಾಜ್ಯದ ವಿ.ವಿ. ಯೊಂದಿಗೂ ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಜತೆಗೆ ಸ್ಕೂಲ್ ಆಫ್ ಮೈನಿಂಗ್ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದೇ ಮುಂದೆ ವಿ.ವಿ. ಆಗಲಿದೆ ಎಂದರು.