Advertisement

ಶಂಕಿತ ಡೆಂಗ್ಯೂ ಪ್ರದೇಶಕ್ಕೆ ಡಿಸಿ ಭೇಟಿ; ಇಂದು ವೈದ್ಯಕೀಯ ತಪಾಸಣೆ

09:32 AM Jun 24, 2019 | Team Udayavani |

ಮಂಗಳೂರು: ಶಂಕಿತ ಡೆಂಗ್ಯೂ ಪೀಡಿತ ಗೋರಕ್ಷಕ ದಂಡು ಮತ್ತು ಅರೆಕೆರೆಬೈಲು ಪ್ರದೇಶಕ್ಕೆ ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಮತ್ತು ಜಿಲ್ಲಾ ಹಾಗೂ ಮಂಗಳೂರು ಮನಪಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಜ್ವರ ಕಾಣಿಸಿಕೊಂಡಿರುವ ಮನೆಗಳ ಸಮೀಕ್ಷೆ ನಡೆಸಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಿದರು.

Advertisement

30 ಮನೆಗಳಲ್ಲಿ ಜ್ವರ ಕಾಣಿಸಿ ಕೊಂಡಿದ್ದು, ಈ ಎಲ್ಲ ಮನೆಗಳ ಸಮೀಕ್ಷೆ ನಡೆಸಲಾಯಿತು. 90 ಮನೆಗಳಲ್ಲಿ ಸೊಳ್ಳೆ ಉತ್ಪತ್ತಿ ಆಗುವ ಸುಮಾರು 300- 400 ವಸ್ತುಗಳು ಪತ್ತೆಯಾಗಿದ್ದು, ಅವುಗಳನ್ನು ನಾಶಪಡಿಸಲಾಯಿತು. ಎಳನೀರು ಚಿಪ್ಪು, ಹಳೆ ಟೈರ್‌ಗಳು, ಬಾಟಲಿ ಮತ್ತು ಇತರ ಪಾತ್ರೆಗಳಲ್ಲಿ ತುಂಬಿದ್ದ ನೀರಿನಲ್ಲಿ ಸೊಳ್ಳೆ ಉತ್ಪತ್ತಿ ಆಗಿರುವುದು ಕಂಡು ಬಂದಿದ್ದು, ತೆರವು ಮಾಡಲಾಯಿತು.

ವೈದ್ಯಕೀಯ ತಪಾಸಣೆ
ಶಂಕಿತ ಜ್ವರ ಕಾಣಿಸಿಕೊಂಡಿರುವ ಜನರಿಗೆ ಡೆಂಗ್ಯೂ ಇದೆಯೇ ಎನ್ನುವು ದನ್ನು ಖಚಿತ ಪಡಿಸಿಕೊಳ್ಳುವ ಉದ್ದೇಶದಿಂದ ಸೋಮವಾರ ಈ ಪ್ರದೇಶದಲ್ಲಿ ಆರೋಗ್ಯ ಶಿಬಿರವನ್ನು ನಡೆಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗುವುದು ಎಂದು ಮಂಗಳೂರು ತಾಲೂಕು ಆರೋಗ್ಯ ಅಧಿಕಾರಿ ಡಾ| ನವೀನ್‌ ತಿಳಿಸಿದ್ದಾರೆ.

ಡೆಂಗ್ಯೂ ಜ್ವರವನ್ನು ಖಚಿತ ಪಡಿಸಲು ಎಲಿಸಾ ಟೆಸ್ಟ್‌ ನಡೆಸಲಾಗುತ್ತಿದ್ದು, ವರದಿ ಲಭಿಸಲು ಕೆಲವು ದಿನ ಬೇಕಾಗುತ್ತದೆ. ಸೋಮವಾರ ನಡೆಸಲಾಗುವ ವೈದ್ಯಕೀಯ ಪರೀಕ್ಷೆಯ ವರದಿ ಬರಲು ಎರಡು ದಿನ ಬೇಕು ಎಂದು ವಿವರಿಸಿದ್ದಾರೆ.

ಜಿಲ್ಲಾಧಿಕಾರಿಗಳ ಜತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ| ರಾಮಕೃಷ್ಣ ರಾವ್‌, ಮಲೇರಿಯಾ ಘಟಕದ ವೈದ್ಯಾದಿಕಾರಿ ಡಾ| ಅರುಣ್‌, ಆಶಾ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಇದ್ದರು.

Advertisement

ಕಣ್ಗಾವಲು ಕಡಿಮೆಯಾಯಿತೇ?
ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿ ಕೊಂಡಾಗಲೇ ಈ ಬಗ್ಗೆ ಗಮನ ಹರಿಸಬೇಕಾಗಿತ್ತು. ತತ್‌ಕ್ಷಣ ಗಮನ ಹರಿಸದ ಕಾರಣ ಮತ್ತಷ್ಟು ಪ್ರದೇಶಕ್ಕೆ ವಿಸ್ತರಿಸಿದೆ. ಇಲಾಖೆಯ ಸರ್ವೇಕ್ಷಣಾ ವಿಭಾಗದ ಕಣ್ಗಾವಲು ಕಡಿಮೆಯಾದ ಬಗ್ಗೆ ಕಾಣಿಸುತ್ತಿದೆ. ಒಂದಿಬ್ಬರಿಗೆ ಜ್ವರ ಬಂದಾಗಲೇ ಎಚ್ಚತ್ತು, ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಮಾಡಲು ಕ್ರಮ ಕೈಗೊಂಡಿದ್ದರೆ ಈ ಪ್ರಮಾಣದಲ್ಲಿ ಹರಡುತ್ತಿರಲಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಪರಿಸ್ಥಿತಿ ನಿಯಂತ್ರಣದಲ್ಲಿದೆ: ಡಾ| ನವೀನ್‌
ಪ್ರಸ್ತುತ ಗೋರಕ್ಷಕ ದಂಡು ಮತ್ತು ಅರೆಕೆರೆಬೈಲು ಪ್ರದೇಶದ 9 ಮಂದಿ ಶಂಕಿತ ಡೆಂಗ್ಯೂ ಪೀಡಿತರು ನಗರದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಎಲ್ಲರೂ ವಾರ್ಡ್‌ಗಳಲ್ಲಿ ಇದ್ದು, ಐಸಿಯು ಘಟಕದಲ್ಲಿ ಯಾರೂ ದಾಖಲಾಗಿಲ್ಲ. ಪರಿಸ್ಥಿತಿ ಕೈಮೀರಿ ಹೋಗಿಲ್ಲ; ನಿಯಂತ್ರಣದಲ್ಲಿದೆ. ಜ್ವರ ಪೀಡಿತರ ರಕ್ತದ ಪ್ಲೇಟ್‌ಲೆಟ್‌ ಸ್ವಲ್ಪ ಪ್ರಮಾಣದಲ್ಲಿ ಕಡಿಮೆ ಆಗಿರುವುದು ನಿಜ. ಆದ್ದರಿಂದ ಎಲ್ಲ ಜ್ವರ ಪೀಡಿತರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲು ನಿರ್ಧರಿಸಲಾಗಿದೆ ಎಂದು ಡಾ| ನವೀನ್‌ ವಿವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next