Advertisement

ಬೀದರಲ್ಲಿ ಕಂದಮ್ಮ ಗಳಿಗೆ ವೈರಲ್‌ ಜ್ವರ ಕಾಟ!

04:50 PM Sep 19, 2021 | Team Udayavani |

ಬೀದರ: ಕೋವಿಡ್‌ ಮೂರನೇ ಅಲೆ ಭೀತಿ ನಡುವೆ ಗಡಿ ನಾಡು ಬೀದರ್‌ ಸೇರಿದಂತೆ ರಾಜ್ಯಾದ್ಯಂತ ಮಕ್ಕಳಲ್ಲಿ ಕಾಣಿಸಿಕೊಂಡಿರುವ ಹೊಸ ಬಗೆಯ “ವೈರಾಣು ಜ್ವರ’ ಪೋಷಕರ ಹಾಗೂ ಆರೋಗ್ಯ ಇಲಾಖೆ ನಿದ್ದೆಗೆಡಿಸಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಜ್ವರ ಪೀಡಿತ ಮಕ್ಕಳ ದಾಖಲಾತಿ ಹೆಚ್ಚುತ್ತಿದೆ. ಆದರೆ, ಜೀವ ಹಾನಿಯ ಆತಂಕ ಇಲ್ಲ ಎಂಬುದು ಸಮಾಧಾನಕರ ಸಂಗತಿ.

Advertisement

ಆಗಸ್ಟ್‌ ತಿಂಗಳಾಂತ್ಯ ವೇಳೆ ಹವಾಮಾನದಲ್ಲಿನ ದಿಢೀರ್‌ ಬದಲಾವಣೆಯಿಂದಾಗಿ ಅನಾರೋಗ್ಯ ಪೀಡಿತ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದ್ದು, ವೈರಾಣು ಜ್ವರ ಉಲ್ಬಣಗೊಳ್ಳುತ್ತಿದೆ. ವಿಶೇಷವಾಗಿ 2ರಿಂದ 8 ವರ್ಷದೊಳಗಿನ ಮಕ್ಕಳಲ್ಲಿ ಜ್ವರ, ನೆಗಡಿ, ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಮಕ್ಕಳ ಚಿಕಿತ್ಸೆಗೆ ಹಾಸಿಗೆ ಕೊರತೆ ಕಾಡಲಾರಂಭಿಸಿದೆ. ಇತ್ತ ಬ್ರಿಮ್ಸ್‌ ಸೇರಿ ಸರ್ಕಾರಿ ಆಸ್ಪತ್ರೆ ಗಳಲ್ಲಿಯೂ ರೋಗಿಗಳ ದಾಖಲಾತಿ ಹೆಚ್ಚುತ್ತಿದೆ. ಸದ್ಯ ಯಾವುದೇ ಮಕ್ಕಳಲ್ಲಿ ಕೋವಿಡ್‌ ಕಾಣಿಸಿಕೊಂಡಿಲ್ಲವಾದರೂ ಸೋಂಕಿನ ಭೀತಿ ಮಾತ್ರ ತಪ್ಪಿಲ್ಲ.

ಜಿಲ್ಲಾ ಬ್ರಿಮ್ಸ್‌ ಆಸ್ಪತ್ರೆಯೊಂದರಲ್ಲಿ ಆಗಸ್ಟ್‌ ತಿಂಗಳಲ್ಲಿ 57, ಸೆ.1ರಿಂದ ಈವರೆಗೆ 35 ಮಕ್ಕಳು ಜ್ವರದ ಕಾರಣಕ್ಕೆ ಒಳ ರೋಗಿಗಳಾಗಿ ದಾಖಲಾಗಿದ್ದರೆ, ಪ್ರತಿನಿತ್ಯ 15-20 ಮಕ್ಕಳು ವೈರಾಣು ಜ್ವರ ಮತ್ತು ಇನ್ನಿತರ ಸಮಸ್ಯೆಗಳಿಂದ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದು ಹೋಗುತ್ತಿದ್ದಾರೆ. ತಾಲೂಕು ಆಸ್ಪತ್ರೆಗಳಲ್ಲಿಯೂ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿದೆ. ಮತ್ತೂಂದೆಡೆ ಖಾಸಗಿ ಆಸ್ಪತ್ರೆಗಳಲ್ಲೂ ಒಳ ರೋಗಿಗಳಾಗಿ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಜುಲೈ ತಿಂಗಳಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚಳವಾಗಿದೆ. ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳ ಸಂಖ್ಯೆಯೂ ದ್ವಿಗುಣವಾಗಿದೆ.

ಇದನ್ನೂ ಓದಿ:ಕೋವಿಡ್ ಸಮಯದಲ್ಲಿ ಮನಮೋಹನ್‌ ಸಿಂಗ್ ಪಿಎಂ ಆಗಿದ್ದರೆ ಏನಾಗಿರುತ್ತಿತ್ತೋ: ಅರುಣ್ ಸಿಂಗ್ ಲೇವಡಿ

ಬೀದರ ಜಿಲ್ಲೆಯಲ್ಲಿ ಅಂದಾಜು 12 ವರ್ಷದೊಳಗಿನ 2.5 ಲಕ್ಷ ಮಕ್ಕಳಿದ್ದಾರೆ. ಬ್ರಿಮ್ಸ್‌ ಆಸ್ಪತ್ರೆಯಲ್ಲಿ ಕೋವಿಡ್‌ ಬೆಡ್‌ (ಮಕ್ಕಳ) ಹೊರತುಪಡಿಸಿ 75 ಹಾಸಿಗೆಗಳ ವ್ಯವಸ್ಥೆ ಇದ್ದು, ಬಹುತೇಕ ಎಲ್ಲ ಮಕ್ಕಳ ವಾರ್ಡ್‌ನಲ್ಲಿ ವೈದ್ಯಕೀಯ ಆಮ್ಲಜನಕ ಸಂಪರ್ಕದ ಬೆಡ್‌ಗಳಿವೆ. ಜತೆಗೆ ಇಲ್ಲಿನ ಓಲ್ಡ್‌ ಸಿಟಿಯ ನೂರು ಹಾಸಿಗೆ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯಕೀಯ ವ್ಯವಸ್ಥೆ ಇದೆ. ಆಸ್ಪತ್ರೆಗೆ ದಾಖಲಾಗುತ್ತಿರುವ ಎಲ್ಲಾ ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದ ನಂತರವೇ ಚಿಕಿತ್ಸೆ ನೀಡಲಾಗುತ್ತಿದ್ದು, ಕೋವಿಡ್‌ ನೆಗೆಟಿವ್‌ ವರದಿ ಬರುತ್ತಿರುವುದು ಪೋಷಕರು ನಿಟ್ಟಿಸಿರು ಬಿಡುವಂತಾಗಿದೆ.

Advertisement

ವೈರಾಣು ಜ್ವರದಿಂದ ದಾಖಲಾಗುತ್ತಿರುವ ಮಕ್ಕಳು ನಾಲ್ಕೈದು ದಿನಗಳಲ್ಲಿ ಚಿಕಿತ್ಸೆಯಿಂದ ಗುಣಮುಖ ಆಗುತ್ತಿದ್ದಾರೆ. ಆದರೆ, ಉಸಿರಾಟ ಸಮಸ್ಯೆಯಿರುವ ಮಕ್ಕಳಿಗೆ ಆಮ್ಲಜನಕ ಸಂಪರ್ಕದ ಅಗತ್ಯವಿರುವುದರಿಂದ ಒಂದು ವಾರ ಬೇಕಾಗುತ್ತಿದೆ. ಇನ್ನೂ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಕಡಿಮೆಯಾಗಿರುವ ಮಕ್ಕಳ ದೇಹಸ್ಥಿತಿ ಗಂಭೀರವಾಗುತ್ತಿದ್ದು, ಅಂಥವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಿಂದೆ ಕೋವಿಡ್‌ ಹಾಟ್‌ಸ್ಪಾಟ್‌ ಎನಿಸಿಕೊಂಡಿದ್ದ ಬೀದರ ಜಿಲ್ಲೆ ಈಗ ರಾಜ್ಯದ ಮೊದಲ ಸೋಂಕು ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಪಡೆದರೂ ಎರಡು ರಾಜ್ಯದ ಗಡಿಗೆ ಹೊಂದಿಕೊಂಡಿರುವುದರಿಂದ 3ನೇ ಅಲೆಯ ಆತಂಕ ಇದ್ದೆ ಇದೆ. ಈ ಸಮಯದಲ್ಲೇ ಮಕ್ಕಳಲ್ಲಿ ವೈರಲ್‌ ಕಾಯಿಲೆ ಕಾಣಿಸಿಕೊಂಡಿರುವುದು ಮಕ್ಕಳಲ್ಲಿ ಆಘಾತ ಮೂಡಿಸಿದೆ. ಆದರೆ, ಯಾರೂ ಆತಂಕಪಡುವ ಅಗತ್ಯವಿಲ್ಲ. ಹಾಗಂತ ಉದಾಸಿನ ತೋರದೆ ಮಕ್ಕಳನ್ನು ಸರಿಯಾಗಿ ಆರೈಕೆ ಮಾಡಬೇಕೆಂಬುದು ವೈದ್ಯರ ಸಲಹೆ.

ಹವಾಮಾನ ವೈಪ್ಯರೀತ್ಯದಿಂದ ಜಿಲ್ಲೆಯಲ್ಲೂ ಮಕ್ಕಳಲ್ಲಿ ವೈರಲ್‌ ಜ್ವರ ಹೆಚ್ಚಿದ್ದು, ಕೆಮ್ಮು, ದಮ್ಮು, ಜ್ವರ, ಶೀತ ಮತ್ತು ಹೊಟ್ಟೆ ಸೆಳೆತ ಕಂಡು ಬಂದಿದೆ. ಬ್ರಿಮ್ಸ್‌ನಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ 95 ಮಕ್ಕಳು ದಾಖಲಾಗಿ ಚಿಕಿತ್ಸೆ ಪಡೆದಿದ್ದು, ಇನ್ನೂ 11 ಜನ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ಮಕ್ಕಳಿಗೆ ಕೋವಿಡ್‌ ಪರೀಕ್ಷೆ ಬಳಿಕ ಚಿಕಿತ್ಸೆ ನೀಡಲಾಗುತ್ತಿದ್ದು, ಈವರೆಗೆ ಯಾವುದೇ ಮಗುವಿನಲ್ಲೂ ಸೋಂಕು ಪತ್ತೆಯಾಗಿಲ್ಲ. ಹಾಗಾಗಿ ಪೋಷಕರು ಯಾವುದೇ ಆತಂಕ ಪಡಬೇಕಿಲ್ಲ. ಜ್ವರ ಕಾಣಿಸಿಕೊಂಡಲ್ಲಿ ಶೀಘ್ರ ಚಿಕಿತ್ಸೆ ನೀಡಬೇಕು.
-ಡಾ| ಶಾಂತಲಾ ಕೌಜಲಗಿ, ಮುಖ್ಯಸ್ಥರು, ಮಕ್ಕಳ ವಿಭಾಗ, ಬ್ರಿಮ್‌

-ಶಶಿಕಾಂತ ಬಂಬುಳಗೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next