ಸೊಲ್ಲಾಪುರ: ಸೊಲ್ಲಾಪುರ ಮೀಸಲು ಮತಕ್ಷೇತ್ರದಲ್ಲಿ ಲೋಕಸಭೆ ಚುನಾವಣೆ ರಂಗೇರಿದ್ದು, ಗದ್ದುಗೆ ಗುದ್ದಾಟ ಜೋರಾಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿಗಳು ಬಿಸಿಲಿನಲ್ಲಿಯೂ ಅಬ್ಬರದ ಪ್ರಚಾರ ಕೈಗೊಂಡಿದ್ದಾರೆ.
ಸೊಲ್ಲಾಪುರ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ, ಬಿಜೆಪಿ ಅಭ್ಯರ್ಥಿ ಗೌಡಗಾಂವ ಮಠದ ಪೂಜ್ಯ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿ ಡಾ| ಪ್ರಕಾಶ ಅಂಬೇಡ್ಕರ್ ಚುನಾವಣೆಗೆ ಸ್ಪರ್ಧಿಸಿದ್ದು, ಈ ಮೂವರ ನಡುವೆ ತೀವ್ರ ಪೈಪೋಟಿ ನಡೆದಿದೆ.
ಆಯಾ ಪಕ್ಷದ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ಮತದಾರರ ಮನವೊಲಿಸಲು ಪ್ರಯತ್ನಿಸುತ್ತಿದ್ದು, ಈಗಾಗಲೇ ಒಂದು ಹಂತದ ಪ್ರಚಾರ ಮುಗಿಸಿದ್ದಾರೆ.
ಬಿಜೆಪಿ, ಕಾಂಗ್ರೆಸ್ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷದ ಮೂವರು ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ನಡೆದಿದ್ದು, ಜಾತಿ ಮತ್ತು ಧರ್ಮದ ಲೆಕ್ಕಾಚಾರದ ಮೇಲೆ ಲೋಕಸಭಾ ಚುನಾವಣೆ ಎದುರಿಸುತ್ತಿದ್ದಾರೆ. ಅಲ್ಲದೆ ಇದೇ ಮೊದಲ ಬಾರಿಗೆ ಸೊಲ್ಲಾಪುರ ಮತಕ್ಷೇತ್ರದಲ್ಲಿ ಬಿಜೆಪಿಯಿಂದ ಡಾ| ಜಯಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ವಂಚಿತ ಬಹುಜನ ಆಘಾಡಿ ಪಕ್ಷದಿಂದ ಡಾ| ಪ್ರಕಾಶ ಅಂಬೇಡಕರ್ ಅವರು ಚುನಾವಣೆ ಸ್ಪರ್ಧಿಸಿದ್ದರಿಂದ ಕಾಂಗ್ರೆಸ್ ಅಭ್ಯರ್ಥಿಯಾದ ಕೇಂದ್ರದ ಮಾಜಿ ಗೃಹ ಸಚಿವ ಸುಶೀಲಕುಮಾರ ಶಿಂಧೆ ಅವರಿಗೆ ಭಾರಿ ತಲೇನೋವಾಗಿದೆ. ಅಲ್ಲದೇ ಈ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠಿತ ಕ್ಷೇತ್ರವಾಗಿ ಪರಿಣಮಿಸಿದೆ.
ಬಿಜೆಪಿ, ಕಾಂಗ್ರೆಸ್ ಮತ್ತು ವಂಚಿತ ಬಹುಜನ ಆಘಾಡಿ ಪಕ್ಷದ ಅಭ್ಯರ್ಥಿಗಳು ಆರೋಪ-ಪ್ರತ್ಯಾರೋಪಗಳ ಮಧ್ಯೆ ಚುನಾವಣೆ ಪ್ರಚಾರ ಕೈಗೊಂಡಿದ್ದಾರೆ. ಈ ಬಾರಿ ಗೆಲವು ಯಾರದ್ದು? ಎನ್ನುವುದರ ಬಗ್ಗೆ ಜಿಲ್ಲಾದ್ಯಂತ ಚರ್ಚೆ ನಡೆಯುತ್ತಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ.