ಭಾಲ್ಕಿ: ಸಿದ್ದೇಶ್ವರ ಶ್ರೀಗಳ ಪ್ರವಚನ ಕೇಳುವ ಸೌಭಾಗ್ಯ ತಾಲೂಕಿನ ಜನತೆಗೆ ಮತ್ತೂಮ್ಮೆ ಒಲಿದು ಬಂದಿದೆ. ನ.4ರಿಂದ ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಶ್ರೀಗಳು ತಿಂಗಳ ಕಾಲ ಆಧ್ಯಾತ್ಮಿಕ ಪ್ರವಚನ ನಡೆಸಿ ಕೊಡಲಿದ್ದಾರೆ. ಅಂತಹ ಶ್ರೀಗಳ ಪ್ರವಚನ ಆಲಿಸಲು ಪೂರಕ ವಾತಾವರಣ ನಿರ್ಮಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಈಶ್ವರ ಖಂಡ್ರೆ ಹೇಳಿದರು.
ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಪ್ರವಚನದ ಸ್ಥಳ ಪರಿಶೀಲನೆ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ನಡೆಸಿದ ಅವರು, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮೀಜಿ ಅವರು ನಡೆದಾಡುವ ವಿಶ್ವವಿದ್ಯಾಲಯ ಮತ್ತು ಜ್ಞಾನದ ಕಣಜ ಆಗಿದ್ದಾರೆ. ಅವರ ಪ್ರವಚನ ಆಲಿಸಿ ಲಕ್ಷಾಂತರ ಜನ ಬದಲಾಗಿ ತಮ್ಮ ಜೀವನವನ್ನು ಪಾವನವಾಗಿಸಿಕೊಂಡಿದ್ದಾರೆ. ಅಂತಹ ಮಹಾಪುರುಷರು ನಮ್ಮ ಭಾಗದಲ್ಲಿ ಪ್ರವಚನ ನಡೆಸಿ ಕೊಡಲು ಬರುತ್ತಿರುವುದು ನಮ್ಮೆಲ್ಲರಿಗೆ ಹೆಮ್ಮೆ ತರಿಸಿದೆ ಎಂದರು.
ಪ್ರತಿದಿನ ಬೆಳಗ್ಗೆ 6.30ರಿಂದ 7.30ರ ವರೆಗೆ ಶ್ರೀಗಳ ಪ್ರವಚನ ನಡೆಯಲಿದ್ದು, ಪ್ರವಚನ ಆಲಿಸಲು ಜಿಲ್ಲೆಯ ಮೂಲೆ ಮೂಲೆಯಿಂದ ಸಾವಿರಾರೂ ಸಂಖ್ಯೆಯಲ್ಲಿ ಜನರು ಹರಿದು ಬರಲಿದ್ದಾರೆ. ಪ್ರವಚನ ಸ್ಥಳದಲ್ಲಿ ಶಾಂತತೆ, ಶಿಸ್ತು, ಸ್ವತ್ಛತೆ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರವಚನದ ಅವಧಿಯಲ್ಲಿ ಚನ್ನಬಸವಾಶ್ರಮ ಎದುರಿನ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಮಾರ್ಗ ಬದಲಿಸಿ ಶಾಂತತೆ ಕಾಪಾಡಬೇಕು. ಪಾರ್ಕಿಂಗ್‌ಗೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜತೆಗೆ ಪಟ್ಟಣದ ರಸ್ತೆ, ಚರಂಡಿ ಸ್ವತ್ಛತೆ, ಅಲ್ಲಲ್ಲಿ ಮೊಬೈಲ್ ಶೌಚಗೃಹ ಅಳವಡಿಸುವುದು, ಕುಡಿವ ನೀರಿನ ವ್ಯವಸ್ಥೆ ಕಲ್ಪಿಸುವುದು, ವಿದ್ಯುತ್ ವ್ಯತ್ಯಯ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ಸಿದ್ದೇಶ್ವರ ಸ್ವಾಮೀಜಿ ಅವರ ನಡೆ-ನುಡಿ ಜಗತ್ತಿಗೆ ಮಾದರಿ ಆಗಿದೆ. ಅವರ ಪ್ರವಚನದಿಂದ ಸಾಕಷ್ಟು ಜನ ಉದ್ಧಾರ ಆಗಿದ್ದಾರೆ. ಅವರು ಪ್ರವಚನ ನಡೆಸಿಕೊಡಲು ನಮ್ಮಲ್ಲಿಗೆ ಬರುತ್ತಿರುವುದು ಹರ್ಷ ತಂದಿದೆ. ಶ್ರೀಗಳ ಪ್ರವಚನ ಯಶಸ್ವಿಗೆ ಅಗತ್ಯ ಸಿದ್ಧತೆ ಮಾಡಿಕೊಡಲಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಇಂದೇ ಪುನೀತ್ ಅಂತ್ಯಕ್ರಿಯೆ ಸಾಧ್ಯತೆ : ಸಚಿವರಿಂದ ಸ್ಥಳ ಪರಿಶೀಲನೆ
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೀರ್ತಿ ಚಾಲಕ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್, ಪುರಸಭೆ ಅಧ್ಯಕ್ಷ ಬಸವರಾಜ ವಂಕೆ, ಪ್ರಮುಖರಾದ ಹಣಮಂತರಾವ ಚವ್ಹಾಣ, ಶಶಿಧರ ಕೋಸಂಬೆ, ಟಿಂಕು ರಾಜಭವನ, ರಾಜಕುಮಾರ ಮೋರೆ, ಕಾಶಿನಾಥ ಲದ್ದೆ, ಬಸವರಾಜ ಮರೆ, ಜೈಪಾಲ ಬೋರಾಳೆ, ಪ್ರಶಾಂತ ಕೊಟಗೀರಾ, ದೀಪಕ ಠಮಕೆ ಇದ್ದರು.