ಮಂಗಳೂರು: ಇದೇ ಮೊದಲ ಬಾರಿಗೆ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತ ಎಣಿಕೆಗೆ ಮಂಗಳೂರು ನಗರದ ಹೊರವಲಯದಲ್ಲಿರುವ ಸುರತ್ಕಲ್ ಎನ್‌ಐಟಿಕೆ ಆವರಣವನ್ನು ನಿಗದಿಪಡಿಸ ಲಾಗಿದೆ. ಮತದಾನ ನಡೆದ ಬಳಿಕ ಮತ ಎಣಿಕೆಗೆ ಬರೋಬ್ಬರಿ ಒಂದು ತಿಂಗಳು ಕಾಯಬೇಕಾಗಿದ್ದು, ಭದ್ರತೆಯ ದೃಷ್ಟಿಯಿಂದ ಮತ್ತು ವಿವಿ ಪ್ಯಾಟ್‌ಗಳನ್ನು ಇರಿಸಲು ಸೂಕ್ತ ಸ್ಥಳಾವಕಾಶ ಅಗತ್ಯವಿರುವ ಕಾರಣ ಈ ಬದಲಾವಣೆ ನಡೆದಿದೆ.
2009ರಲ್ಲಿ ದ.ಕ. ಲೋಕಸಭಾ ಚುನಾವಣೆ ಮತ ಎಣಿಕೆ ನಗರದ ಕೆನರಾ ಕಾಲೇಜು ಆವರಣದಲ್ಲಿ ನಡೆದಿತ್ತು. ಆಗ ಸಂಚಾರ ದಟ್ಟಣೆ ಉಂಟಾದ್ದರಿಂದ ಅನಂತರದ, 2014ರ ಚುನಾವಣೆಯ ಮತ ಎಣಿಕೆಯನ್ನು ಬೋಂದೆಲ್ ಮಹಾತ್ಮಾ ಗಾಂಧಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಸ್ಥಳಾಂತರಿಸ ಲಾಗಿತ್ತು. ಕಳೆದ ಬಾರಿಯ ವಿಧಾನಸಭಾ ಚುನಾವಣಾ ಮತ ಎಣಿಕೆಯೂ ಅಲ್ಲೇ ನಡೆದಿತ್ತು.
ಈ ಬಾರಿ ಮತದಾನ ನಡೆಯುವ ಎ.18ಕ್ಕೂ ಮತ ಎಣಿಕೆ ನಡೆಯುವ ಮೇ 23ಕ್ಕೂ ಒಂದು ತಿಂಗಳು ಸಮಯವಿದೆ. ಹೀಗಾಗಿ ವಿದ್ಯುನ್ಮಾನ ಮತಯಂತ್ರ ಮತ್ತು ವಿವಿ ಪ್ಯಾಟ್‌ಗಳನ್ನು ಅತ್ಯಂತ ಭದ್ರತೆಯಿಂದ ಇರಿಸಬೇಕಾದ ಜವಾಬ್ದಾರಿ ಜಿಲ್ಲಾಡಳಿದ್ದಾಗಿದೆ. ಹೀಗಾಗಿ ಬಿಗಿ ಭದ್ರತೆಯ ದೃಷ್ಟಿಯಿಂದ ಎಣಿಕೆ ಸುರತ್ಕಲ್‌ಗೆ ಸ್ಥಳಾಂತರಿಸಲಾಗಿದೆ.
ಸ್ಥಳ ಪರಿಶೀಲನೆ
ಮತ ಎಣಿಕೆಯನ್ನು ಸುಗಮ ಮತ್ತು ಸುವ್ಯವಸ್ಥಿತ ವಾಗಿಸಲು ಎನ್‌ಐಟಿಕೆ ಆವರಣದಲ್ಲಿ ಸಿದ್ಧತೆ ನಡೆಸಲಾಗುತ್ತಿದೆ. ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಹಿತ ಹಿರಿಯ ಅಧಿಕಾರಿಗಳು ಎನ್‌ಐಟಿಕೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೇಂದ್ರವನ್ನು ಅಂತಿಮಗೊಳಿಸಿದ್ದಾರೆ.
ಭದ್ರತೆಯ ದೃಷ್ಟಿಯಿಂದ ಮತ್ತು ವಿವಿ ಪ್ಯಾಟ್‌ಗಳನ್ನು ಇರಿಸಲು ಸೂಕ್ತ ಸ್ಥಳಾವಕಾಶ ಅಗತ್ಯವಾದ ಕಾರಣ ಸುರತ್ಕಲ್‌ನ ಎನ್‌ಐಟಿಕೆ ಕೇಂದ್ರದಲ್ಲಿ ಈ ಬಾರಿ ಮತ ಎಣಿಕೆ ನಡೆಯಲಿದೆ. ಈ ಸಂಬಂಧ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತ ಪರಿಶೀಲನೆ ನಡೆಸಲಾಗಿದೆ.
– ಶಶಿಕಾಂತ ಸೆಂಥಿಲ್, ಜಿಲ್ಲಾಧಿಕಾರಿ ದ.ಕ.