ಜಮ್ಮು-ಕಾಶ್ಮೀರ: ಬ್ಲಾಕ್ ಡೆವಲಪ್ ಮೆಂಟ್ ಕೌನ್ಸಿಲ್ (BDC) ಅಧ್ಯಕ್ಷೆ ಫರೀದಾ ಖಾನ್ ಅವರನ್ನು ಗುರಿಯಾಗಿರಿಸಿಕೊಂಡು ಉಗ್ರರು ಗುಂಡಿನ ದಾಳಿ ನಡೆಸಿರುವ ಘಟನೆ ಜಮ್ಮು-ಕಾಶ್ಮೀರದ ಸೋಪೊರೆ ಪ್ರದೇಶದಲ್ಲಿ ಸೋಮವಾರ(ಮಾರ್ಚ್ 29) ನಡೆದಿದೆ.
ಇದನ್ನೂ ಓದಿ:ಇನ್ನು ಗಣಿ ಅಧಿಕಾರಿಗಳಿಗೆ ಪೊಲೀಸ್ ಡ್ರೆಸ್, ದರ್ಜೆಗೆ ತಕ್ಕಂತೆ ಸ್ಟಾರ್:ಮುರುಗೇಶ್ ನಿರಾಣಿ
ಫರೀದಾ ಖಾನ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆ ನಡೆದ ಪ್ರದೇಶವನ್ನು ಪೊಲೀಸರು ಹಾಗೂ ಭದ್ರತಾ ಪಡೆ ಸುತ್ತುವರಿದು ಶೋಧ ಕಾರ್ಯಾಚರಣೆ ನಡೆಸುತ್ತಿರುವುದಾಗಿ ವರದಿ ತಿಳಿಸಿದೆ.
ಗುಂಡಿನ ದಾಳಿಯಲ್ಲಿ ಬಿಜೆಪಿ ನಾಯಕಿ, ಬ್ಲಾಕ್ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಫರೀದಾ ಖಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಆದರೆ ಘಟನೆಯಲ್ಲಿ ಒಬ್ಬರು ಕೌನ್ಸಿಲರ್ ಹಾಗೂ ಪಿಎಸ್ ಒ ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ.
ಜಮ್ಮು-ಕಾಶ್ಮೀರ ಪೊಲೀಸರು ನೀಡಿರುವ ಹೇಳಿಕೆ ಪ್ರಕಾರ, ಉಗ್ರರು ಸೋಪೊರೆಯಲ್ಲಿರುವ ನಗರಸಭೆ ಕಚೇರಿ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಕರ್ತವ್ಯ ನಿರತ ಪೊಲೀಸ್ ಶಫ್ ಖತ್ ಅಹ್ಮದ್ ಮತ್ತು ಕೌನ್ಸಿಲರ್ ರಿಯಾಜ್ ಅಹ್ಮದ್ ಸಾವನ್ನಪ್ಪಿದ್ದು, ಮತ್ತೊಬ್ಬ ಕೌನ್ಸಿಲರ್ ಶಂಸುದ್ದೀನ್ ಪೀರ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ದಾಳಿ ನಡೆಸಿದ ಉಗ್ರರು ಸಮೀಪದ ಕಟ್ಟಡವೊಂದರಲ್ಲಿ ಅಡಗಿಕೊಂಡಿದ್ದು, ಇಡೀ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.