Advertisement

ಜನತೆ ಉತ್ತರ ಕೊಟ್ಟಿದ್ದಾರೆ: ಸ್ವಪಕ್ಷೀಯರ ವಿರುದ್ಧ ಕಿಡಿಕಾರಿದ ಯತ್ನಾಳ್

12:29 PM Nov 01, 2022 | Team Udayavani |

ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜನತೆಯ ಆಶೀರ್ವಾದದಿಂದ ಬಿಜೆಪಿ ಅಭೂತಪೂರ್ವ ವಿಜಯ ಸಾಧಿಸಿದೆ. ಇದು ಭವಿಷ್ಯದಲ್ಲಿ ನಡೆಯುವ ರಾಜ್ಯ ವಿಧಾನಸಭೆ ಚುನಾವಣೆ ದಿಕ್ಸೂಚಿ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವ್ಯಾಖ್ಯಾನಿಸಿದ್ದಾರೆ.

Advertisement

ಮಂಗಳವಾರ ನಗರದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶದಲ್ಲಿ ಪ್ರಧಾನಿ ಮೋದಿ, ರಾಜ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಮಾಡಿರುವ ಸಾಧನೆ, ನಗರದಲ್ಲಿ ನಾನು ಮಾಡಿರುವ ಅಭಿವೃದ್ಧಿ ಮೆಚ್ಚಿ ಜನರು ಬಿಜೆಪಿ ಪಕ್ಷವನ್ನು ಬೆಂಬಲಿಸಿದ್ದಾರೆ. ಅಭಿವೃದ್ಧಿ ಹಾಗೂ ಹಿಂದುತ್ವದ ಬಲವರ್ಧನೆಗಾಗಿ ನನ್ನ ಕೈ ಬಲಪಡಿಸಿದ್ದಕ್ಕಾಗಿ ನಾನು ವಿಜಯಪುರ ಮಹಾನಗರದ ಜನತೆಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಗೆಲವು ದಾಖಲಿಸಿದೆ. ವಿಜಯಪುರ ಸ್ಥಳೀಯ ಸಂಸ್ಥೆಯಲ್ಲಿ ಯಾರು, ಯಾವ ಪಕ್ಷ ಗೆಲ್ಲದಷ್ಟು ಸ್ಥಾನ ಗೆಲ್ಲುವ ಮೂಲಕ ನಿರೀಕ್ಷೆ ಮೀರಿದ ಸಾಧನೆ ಈ ಬಾರಿ ಬಿಜೆಪಿ ಮಾಡಿದೆ.

ಪಾಲಿಕೆಯ 35 ಸ್ಥಾನಗಳಲ್ಲಿ 17 ಸ್ಥಾನಗಳನ್ನು ಬಿಜೆಪಿ ಗೆದ್ದಿದೆ. ಕಳೆದ ಬಾರಿಗಿಂತ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಿದೆ. ಅಭಿವೃದ್ದಿ ಹಾಗೂ ಹಿಂದುತ್ವವನ್ನು ಜನರು ಒಪ್ಪಿದ್ದಾರೆ ಎಂಬುದಕ್ಕೆ ಇದು ನಿದರ್ಶನ. ಹೀಗಾಗಿ ವಿಜಯಪುರ ಪಾಲಿಕೆ ಚುನಾವಣೆ ರಾಜ್ಯ ರಾಜಕೀಯದ ದಿಕ್ಸೂಚಿ ಎಂದು ವಿಶ್ಲೇಷಿಸಿದರು.

ವಿಜೇತ ಐವರು ಪಕ್ಷೇತರರಲ್ಲಿ ಒಬ್ಬರು ಫಲಿತಾಂಶ ಪ್ರಕಟವಾಗುತ್ತಲೇ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದು, ಇನ್ನೂ ಇಬ್ಬರು ಸದಸ್ಯರು ನಮ್ಮ ಪಕ್ಷ ಸೇರಲು ಸಂಪರ್ಕದಲ್ಲಿದ್ದಾರೆ. ಹೀಗಾಗಿ ನಾನು ಚುನಾವಣಾ ಪೂರ್ವದಲ್ಲಿ ಹೇಳಿದಂತೆ ವಿಜಯಪುರ ಮಹಾನಗರ ಪಾಲಿಕೆ ಕೇಸರಿ ಧ್ವಜ ಹಾರಿಸಲು ಸಿದ್ಧರಾಗಿದ್ದೇವೆ ಎಂದರು.

Advertisement

ಕೆಲವು ವಾರ್ಡಗಳಲ್ಲಿ ಅತಿ ಕಡಿಮೆ ಮತಗಳ ಅಂತರಿಂದ ಸೋತಿದ್ದೇವೆ. 3 ವಾರ್ಡಗಳಲ್ಲಂತೂ ತೀರಾ ಕಡಿಮೆ ಅಂತರದಿಂದ ಬಿಜೆಪಿ ಅಭ್ಯರ್ಥಿಗಳು ಸೋತಿದ್ದಾರೆ. ಬಿಜೆಪಿ ದಿಗ್ವಿಜಯಕ್ಕೆ ಸ್ವಯಂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರವಾಣಿ ಕರೆ ಮಾಡಿ ನಗರದ ಜನರಿಗೆ ಹಾಗೂ ನನ್ನನ್ನು ಅಭಿನಂದಿಸಿದ್ದಾರೆ ಎಂದರು.

ಪಾಲಿಕೆಯ ಚುನಾವಣೆಯಲ್ಲಿ ಕೆಲವು ಸ್ಥಳೀಯ ನಾಯಕರು ಮನೆಯಲ್ಲಿ ಕುಳಿತು ಬಿಜೆಪಿ ಸೋಲಿಸಲು ಕುತಂತ್ರ ಮಾಡಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷದಲ್ಲಿದ್ದ ಕೆಲ ಕಳ್ಳರ ಗ್ಯಾಂಗ್ ಗೆ ಬೆಂಗಳೂರು, ಮುಧೋಳದಿಂದ ಸಾಕಷ್ಟು ಸಹಾಯ ಹಸ್ತ ಬಂದಿತ್ತು. ಬಿಜೆಪಿ ಸೋಲಿಸಿದರೆ ಯತ್ನಾಳ ಮಣಿಸಲು ಸಾಧ್ಯ ಎಂದು ಸಂಚು ರೂಪಿಸಿದ್ದರು ಎಂದು ಸ್ವಪಕ್ಷೀಯರ ವಿರುದ್ಧವೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

ಆದರೆ ಮಹಾನಗರದ ಜನರು ಹುಚ್ಚರಿಲ್ಲ, ಅವರ ಕುತಂತ್ರಕ್ಕೆ ಸೂಕ್ತವಾಗಿಯೇ ಉತ್ತರಿಸಿದ್ದಾರೆ. ನಾನು ಮಾತನಾಡುವುದಕ್ಕಿಂತ ಜನತೆಯೇ ತಕ್ಕ ಉತ್ತರ ಕೊಟ್ಟಿದ್ದಾರೆ ಎಂದು ಹರಿಹಾಯ್ದರು.

ಬಿಜಪಿ ಸೋಲಿಸುವ ಸಂಚುಕೋರರು ಇನ್ನಾದರೂ ರಾಜಕೀಯ ನಿವೃತ್ತಿ ಪಡೆದು ಮನೆಯಲ್ಲಿ ವಿಶ್ರಾಂತಿ ಪಡೆಯಲಿ ಎಂದು ಯತ್ನಾಳ ಸಲಹೆ ನೀಡಿದರು

Advertisement

Udayavani is now on Telegram. Click here to join our channel and stay updated with the latest news.

Next