ಮಹಾನಗರ : ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಮುನ್ನೆಚ್ಚರಿಕೆಗೆ ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ಅರ್ಧದಷ್ಟು ಕಡಿತಗೊಳಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಇದರನ್ವಯ, 18 ಎಂಜಿಡಿ ನೀರು ಬಳಕೆ ಮಾಡುತ್ತಿದ್ದ ಕೈಗಾರಿಕೆಗಳಿಗೆ ಎಪ್ರಿಲ್ ಮಧ್ಯಭಾಗದಲ್ಲಿ ಕೇವಲ 10 ಎಂಜಿಡಿ ನೀರು ಬಳಕೆ ಮಾಡಲು ಸ್ಪಷ್ಟ ಸೂಚನೆ ನೀಡಲಾಗಿದೆ.
ಈಗ ತುಂಬೆ ಡ್ಯಾಂನಲ್ಲಿ ನೀರಿನ ಒಳ ಹರಿವು ಕಡಿಮೆಯಾಗಿದ್ದು, ಪ್ರಸ್ತುತ ಅವಧಿಯಲ್ಲಿ ಮಳೆ ಕೂಡ ಬಾರದ ಹಿನ್ನೆಲೆಯಲ್ಲಿ ಮಹಾನಗರಕ್ಕೆ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ನೀರು ರೇಷನಿಂಗ್ ಆರಂಭಿಸಲಾಗಿದೆ.
3 ಎಂಜಿಡಿ ನೀರು ಉಳಿಸಲು ನಿರ್ಧಾರ
ಶಂಭೂರಿನ ಎಎಂಆರ್ ಡ್ಯಾಂ, ತುಂಬೆ ಡ್ಯಾಂ ಸಹಿತ ಒಟ್ಟು 18 ಎಂಜಿಡಿ ನೀರನ್ನು ಕೈಗಾರಿಕೆಗಳು ಬಳಕೆ ಮಾಡುತ್ತಿದ್ದವು. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಲು ಸೋಮವಾರದಿಂದ ಈ ಪ್ರಮಾಣವನ್ನು 15 ಎಂಜಿಡಿಗೆ ಕಡಿತಗೊಳಿಸಲಾಗಿದೆ. ಹೀಗಾಗಿ ನಿತ್ಯ 3 ಎಂಜಿಡಿ ನೀರು ಉಳಿಸಲು ನಿರ್ಧರಿಸಲಾಗಿದೆ. ಎಪ್ರಿಲ್ 1ರಿಂದ 15 ಎಂಜಿಡಿ ಇರುವ ನೀರಿನ ಬಳಕೆಯನ್ನು ಮತ್ತೆ ಕಡಿತಗೊಳಿಸಿ 13 ಎಂಜಿಡಿಗೆ ಇಳಿಸಲಾಗುತ್ತದೆ. ಎ. 15ರಿಂದ ಈ ಪ್ರಮಾಣವನ್ನು 10.5 ಎಂಜಿಡಿಗೆ ಇಳಿಸಲು ದ.ಕ. ಜಿಲ್ಲಾಡಳಿತ ಸೂಚಿಸಿದೆ.
ಕೈಗಾರಿಕೆಗಳಿಗೆ ನೀರು ಕಟ್ ಮಾಡಿರುವ ಹಿನ್ನೆಲೆಯಲ್ಲಿ ಮೇಲುಸ್ತುವಾರಿ ನೋಡಿಕೊಳ್ಳಲು ತುಂಬೆ, ಎಎಂಆರ್ ಡ್ಯಾಂಗಳಲ್ಲಿ ಪಾಲಿಕೆಯ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ರಾತ್ರಿ-ಹಗಲು 2 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲಿದ್ದಾರೆ.
ಕೈಗಾರಿಕೆಗಳಿಗೆ ಎಷ್ಟು ನೀರು?
ನಗರಕ್ಕೆ 160 ಎಂಎಲ್‌ಡಿ (ದಿನವೊಂದಕ್ಕೆ ಮಿಲಿಯ ಲೀಟರ್) ನೀರು ಇಲ್ಲಿವರೆಗೆ ಪೂರೈಕೆಯಾಗುತ್ತಿತ್ತು. ಎಂಜಿಡಿ (ಮಿಲಿಯ ಗ್ಯಾಲನ್ಸ್) ಲೆಕ್ಕಾಚಾರದಲ್ಲಿ 160 ಎಂಎಲ್‌ಡಿ ಅಂದರೆ ಸುಮಾರು 35 ಎಂಜಿಡಿ. ತುಂಬೆ ಡ್ಯಾಂನಿಂದ ಎಂಸಿಎಫ್‌ಗೆ 2 ಎಂಜಿಡಿ, ಎನ್‌ಎಂಪಿಟಿಗೆ 0.5 ಎಂಜಿಡಿ, ಇತರ ಕೈಗಾರಿಕೆಗಳಿಗೆ 1ಎಂಜಿಡಿ ನೀರು ಪೂರೈಕೆಯಾಗುತ್ತಿತ್ತು.
ಬಂಟ್ವಾಳ ಸಮೀಪವಿರುವ ಎಎಂಆರ್ ಡ್ಯಾಂನಿಂದ ಎಂಆರ್‌ಪಿಎಲ್‌ಗೆ 6 ಎಂಜಿಡಿ, ವಿಶೇಷ ಆರ್ಥಿಕ ವಲಯಕ್ಕೆ (ಎಸ್‌ಇಝಡ್) 8 ಎಂಜಿಡಿ ನೀರು ಪೂರೈಕೆ ಯಾಗುತ್ತದೆ. ಹೀಗೆ ಒಟ್ಟು ಸುಮಾರು 18 ಎಂಜಿಡಿಯಷ್ಟು ನೀರು ವಿವಿಧ ಕೈಗಾರಿಕೆಗಳಿಗೆ ತುಂಬೆ, ಎಎಂಆರ್ ಡ್ಯಾಂನಿಂದ ಪೂರೈಕೆಯಾಗುತ್ತಿತ್ತು.
196 ಬೋರ್‌ವೆಲ್; 90 ತೆರೆದ ಬಾವಿ
ನಗರದಲ್ಲಿ ಪ್ರಸ್ತುತದ ಅಂಕಿಅಂಶದಂತೆ 137, ಸುರತ್ಕಲ್‌ನಲ್ಲಿ 59 ಸೇರಿ ಒಟ್ಟು 196 ಬೋರ್‌ವೆಲ್‌ಗಳಿವೆ. ತುಂಬೆಯಿಂದ ಸರಬರಾಜಾಗುವ ಜತೆಗೆ ಈ ಬೋರ್ ವೆಲ್‌ಗಳಿಂದಲೂ ನಗರಕ್ಕೆ ನೀರು ಸರಬರಾಜಾಗುತ್ತಿವೆ. ನಗರದಲ್ಲಿ ಸರಕಾರಿ, ಖಾಸಗಿ ಸಹಿತ ಕುಡಿಯುವ ನೀರಿಗೆ ಬಳಸಲು ಯೋಗ್ಯವಾದ ಒಟ್ಟು 90 ತೆರೆದ ಬಾವಿಗಳನ್ನು ಈ ಹಿಂದೆ ಗುರುತಿಸಲಾಗಿವೆ. ಈ ನೀರಿನ ಮೂಲಗಳ ಬಗ್ಗೆ ವಿಶೇಷ ಗಮನಹರಿಸಲು ಜಿಲ್ಲಾಡಳಿತ ಸೂಚಿಸಿದೆ.
ನೀರು ಮಿತವಾಗಿ ಬಳಸಿ
ನೀರನ್ನು ಸರಿಯಾಗಿ ಬಳಸಿ ಸಂರಕ್ಷಿಸುವ ಮೂಲಕ ಸಮರ್ಪಕ ನಿರ್ವಹಣೆ ಮಾಡಬಹುದಾಗಿದೆ. ನೀರನ್ನು ಪೋಲು ಮಾಡದೇ, ಅಪವ್ಯಯವಾಗದಂತೆ ಮುಂಜಾಗ್ರತೆ ವಹಿಸಿ ಮಳೆ ಪ್ರಾರಂಭ ವಾಗುವವರೆಗೆ ಲಭ್ಯ ನೀರನ್ನು ಕುಡಿಯುವ ಉದ್ದೇಶಕ್ಕೆ ಬಳಸಲು ಒತ್ತು ನೀಡಬೇಕಾಗಿದೆ. ನೀರಿನ ಬಳಕೆಯಲ್ಲೂ ಜಾಗೃತಿ, ಕೌಶಲಗಳ ಅಳವಡಿಕೆಗೂ ಹೆಚ್ಚಿನ ಒತ್ತು ನೀಡಬೇಕಾಗಿದೆ.
ಕೈಗಾರಿಕೆಗಳಿಗೆ ನೀರು ಕಡಿತ
ಕೈಗಾರಿಕೆಗಳಿಗೆ ನೀಡುತ್ತಿರುವ ನೀರಿನ ಪ್ರಮಾಣವನ್ನು ತತ್ ಕ್ಷಣದಿಂದ ಕಡಿತಗೊಳಿಸುವಂತೆ ಸೂಚನೆ ನೀಡಲಾಗಿದೆ. ಎಪ್ರಿಲ್‌ನಲ್ಲಿ ಮಳೆ ಬಂದರೆ ಮುಂದೆ ನಗರಕ್ಕೆ ನೀರಿನ ಸಮಸ್ಯೆ ಎದುರಾಗದು. ಒಂದು ವೇಳೆ ಇದೇ ಪರಿಸ್ಥಿತಿ ಇದ್ದರೆ ಮೇ ತಿಂಗಳಿನಲ್ಲಿ ರೇಷನಿಂಗ್ ಮಾಡುವ ಅನಿವಾರ್ಯ.
– ಶಶಿಕಾಂತ್ ಸೆಂಥಿಲ್,
ದ.ಕ. ಜಿಲ್ಲಾಧಿಕಾರಿ
ದ.ಕ. ಜಿಲ್ಲಾಧಿಕಾರಿ
ಮೇಯಲ್ಲಿ ಮಂಗಳೂರಿಗೆ ರೇಷನಿಂಗ್?
ನೇತ್ರಾವತಿ ನದಿಯಲ್ಲಿ ಒಳಹರಿವಿನಲ್ಲಿ ತೀವ್ರಗತಿಯಲ್ಲಿ ಇಳಿಮುಖ ಗೋಚರಿಸಿದ್ದ ಹಿನ್ನೆಲೆಯಲ್ಲಿ ನವೆಂಬರ್ ಮಧ್ಯಭಾಗದಲ್ಲೇ ತುಂಬೆ ವೆಂಟೆಡ್‌ಡ್ಯಾಂನ ಎಲ್ಲ ಗೇಟ್‌ಗಳನ್ನು ಮುಚ್ಚಿ 6 ಮೀಟರ್ ನೀರು ನಿಲ್ಲಿಸಲಾಗಿತ್ತು. ಇದೀಗ ತುಂಬೆ ವೆಂಟೆಡ್‌ಡ್ಯಾಂನಲ್ಲಿ ನೀರಿನ ಮಟ್ಟ 5.8 ಮೀ. ಅಸುಪಾಸಿನಲ್ಲಿದೆ. ಮಳೆಗಾಲಕ್ಕೆ ಇನ್ನೂ 60-70 ದಿನಗಳಿರುವ ಕಾರಣದಿಂದ ಶಂಭೂರಿನ ಎಎಂಆರ್, ದಿಶಾ ಅಣೆಕಟ್ಟಿನಲ್ಲಿ ನೀರಿನ ಲಭ್ಯತೆ ಕಡಿಮೆಗೊಂಡರೆ ಸಹಜವಾಗಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ತಲೆತೋರುತ್ತದೆ. ಒಂದು ವೇಳೆ ಎಪ್ರಿಲ್‌ನಲ್ಲಿ ಮಳೆ ಬಂದರೆ ನೀರಿನ ಆತಂಕ ದೂರವಾಗಬಹುದು. ಆದರೆ, ಮಳೆ ಬಾರದಿದ್ದರೆ, ಬಿಸಿಲು ಇನ್ನೂಹೆಚ್ಚಾದಾರೆ, ಮೇ ತಿಂಗಳಿನಲ್ಲಿ ಮಂಗಳೂರಿಗೆ ರೇಷನಿಂಗ್ ಮಾಡುವುದು ಅನಿವಾರ್ಯ. ಅಂದರೆ ಎರಡು ದಿನಕ್ಕೊಮ್ಮೆ ನೀರು ಕೊಡುವ ಸಾಧ್ಯತೆ ಇದೆ ಎಂದು ಮನಪಾ ಮೂಲಗಳು ತಿಳಿಸಿವೆ.
ದಿನೇಶ್ ಇರಾ