Advertisement
ಅರಬೀ ಸಮುದ್ರದ ಮಧ್ಯ ಭಾಗದಲ್ಲಿ ಮತ್ತು ವಾಯುಭಾರ ಕುಸಿತ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳ ವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ತಿಳಿಸಿದೆ. ಇದಲ್ಲದೆ ಬಂಗಾಲ ಕೊಲ್ಲಿಯ ಮಧ್ಯಭಾಗದಲ್ಲಿ ಸುಂಟರಗಾಳಿ ರೂಪುಗೊಂಡಿದ್ದು, ಅದು ವಾಯು ಭಾರ ಕುಸಿತಕ್ಕೆ ದಾರಿ ಮಾಡಿಕೊಡಲಿದ್ದು ಉತ್ತರ ಕೇರಳದಲ್ಲಿ ಭಾರೀ ಮಳೆಗೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Related Articles
Advertisement
ಮಲಪ್ಪುರಂ ಜಿಲ್ಲೆಯ ಕವಳಪ್ಪಾರ ಮತ್ತು ವಯನಾಡು ಜಿಲ್ಲೆಯ ಪೂತುಮಲದಲ್ಲಿ ಭೂಕುಸಿತ ಪ್ರದೇಶದಲ್ಲಿ ಮಣ್ಣಿನಡಿ ಸಿಲುಕಿಕೊಂಡಿರುವವರ ಪತ್ತೆಗಾಗಿ ಕಾರ್ಯಾಚರಣೆ ನಡೆಯುತ್ತಿರುವಂತೆ ಕವಳಪ್ಪಾರದಲ್ಲಿ ಮಣ್ಣಿನಡಿಯಲ್ಲಿ ಸಿಲುಕಿಕೊಂಡ ಆರು ಮೃತ ದೇಹಗಳನ್ನು ಪತ್ತೆಹಚ್ಚಲಾಯಿತು. ಮಣ್ಣಿನಡಿಯಲ್ಲಿ ಇನ್ನೂ 44 ಮಂದಿ ಸಿಲುಕಿಕೊಂಡಿರುವುದಾಗಿ ತಿಳಿಯಲಾಗಿದೆ. ಮಳೆ, ಭೂಕುಸಿತ ಮತ್ತು ಪ್ರವಾಹದಿಂದ ನಾಪತ್ತೆಯಾದ 62 ಮಂದಿಯನ್ನು ಪತ್ತೆಹಚ್ಚುವ ಶೋಧ ನಡೆಯುತ್ತಿದೆ.
ವಿದ್ಯಾರ್ಥಿಗಳಿಂದ ನೆರವು
ಈ ಬಾರಿಯ ಬಿರುಸಿನ ಗಾಳಿಮಳೆಯ ಹೊಡೆತಕ್ಕೆ ಕಂಗೆಟ್ಟು ಹೋದ ಜಿಲ್ಲೆಯ ಜನತೆಗೆ ಸಾಂತ್ವನ ಸ್ಪರ್ಶ ನೀಡಲು ಜಿಲ್ಲಾಡಳಿತೆ ನಡೆಸುತ್ತಿರುವ ಯತ್ನಕ್ಕೆ ಸ್ಪಂದಿಸುವಲ್ಲಿ ವಿದ್ಯಾರ್ಥಿಗಳೂ ಹಿಂದುಳಿದಿಲ್ಲ.
ಜಿಲ್ಲಾಧಿಕಾರಿ ಡಾ| ಡಿ. ಸಜಿತ್ ಬಾಬು ಅವರ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಬೇರೆ ಬೇರೆ ರೂಪದಲ್ಲಿ ಸಾರ್ವಜನಿಕ ವಲಯವನ್ನು ಸಹಾಯಕ್ಕಾಗಿ ಸಂಪರ್ಕಿಸುತ್ತಿದೆ. ಇದರ ಅಂಗವಾಗಿ ಜಿಲ್ಲಾಧಿಕಾರಿ ಅವರು ನಡೆಸಿದ ವೀಡಿಯೋ ಸಂದೇಶದಿಂದ ಪ್ರಭಾವಿತಗೊಂಡ ಕಾಲೇಜು ವಿದ್ಯಾರ್ಥಿಗಳ ಬಳಗವೊಂದು ಸಹಾಯದ ಸಾಮಗ್ರಿಗಳ ಸಹಿತ ಹೊಸದುರ್ಗ ತಾಲೂಕು ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಕಲೆಕ್ಷನ್ ಸೆಂಟರ್‌ಗೆ ಧಾವಿಸಿ ಬಂದಿದೆ. ಕಾಸರಗೋಡು ಸರಕಾರಿ ಕಾಲೇಜಿನ ಎನ್.ಎಸ್.ಎಸ್. ಸ್ವಯಂ ಸೇವಕರು ಶುಚಿಕರ ಸಾಮಗ್ರಿಗಳು, ಉಡುಪುಗಳು, ಪಾದರಕ್ಷೆಗಳು, ಆಹಾರ ಸಾಮಗ್ರಿಗಳು, ನ್ಯಾಪ್ಕಿನ್‌ಗಳು ಇತ್ಯಾದಿಗಳನ್ನು ಕೊಡುಗೆಯಾಗಿ ನೀಡಿದರು. ಎನ್.ಎಸ್.ಎಸ್. ಸ್ವಯಂಸೇವಕರಾದ ಎಂ. ಅನೂಪ್, ಎಂ. ಹರಿಕೃಷ್ಣನ್, ಸಿ.ಎ. ಆನ್ಸಿ, ಮನೀಷಾ ಕೆ. ಮನು, ಕೆ. ಮಂಜಿಮಾ, ಕೆ. ಶಿಲ್ಪಾ, ಸುಜಿತ್ ಮೊದಲಾದವರು ನೇತೃತ್ವ ವಹಿಸಿದ್ದರು.
ಸಹಾಯ ಹಸ್ತದೊಂದಿಗೆ ವಾಹನ ಇಲಾಖೆ ಸಿಬಂದಿ
ಮಳೆಗಾಲದ ಬಿರುಸಿನ ಸಂಕಷ್ಟಕ್ಕೊಳ ಗಾದವರಿಗೆ ಸಹಾಯ ಹಸ್ತದೊಂದಿಗೆ ಮೋಟಾರು ವಾಹನ ಇಲಾಖೆ ಸಿಬ್ಬಂದಿ ರಂಗಕ್ಕಿಳಿದಿದ್ದಾರೆ. ಹೊಸದುರ್ಗ ತಾಲೂಕು ಕಚೇರಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಕಲೆಕ್ಷನ್ ಸೆಂಟರ್‌ಗೆ ನಿತ್ಯೋಪಯೋಗಿ ಅನೇಕ ಸಾಮಗ್ರಿಗಳನ್ನು ಕೊಡುಗೆಯಾಗಿ ನಿಡಿದ್ದಾರೆ. ಆರ್.ಟಿ.ಒ. ಎಸ್. ಮನೋಜ್, ಎನ್‌ಫೋರ್ಸ್‌ಮೆಂಟ್ ಆರ್.ಟಿ.ಒ. ಮೋಹನ್ ದಾಸ್, ಮೋಟಾರು ವಾಹನ ಇನ್ಸ್ ಪೆಕ್ಟರರಾದ ಟಿ. ವೆಂಕಟನ್, ಎಂ. ವಿಜಯನ್, ರೆಜಿ ಕುರಿಯಾಕೋಸ್, ದಿನೇಶ್ ಕುಮಾರ್, ಗಣೇಶನ್, ಸೀನಿ, ವರಿಷ್ಠಾಕಾರಿ ಕೆ. ಶಶಿ ಅವರ ನೇತೃತ್ವದಲ್ಲಿ ಸಾಮಗ್ರಿ ಹಸ್ತಾಂತರಿಸಲಾಯಿತು.