Advertisement

ಅಸಮಾಧಾನ-ಅಭಿಮಾನ ಮೇಲುಗೈ ಯಾರದ್ದು?

10:46 AM Apr 18, 2019 | Naveen |

ಕಲಬುರಗಿ/ವಾಡಿ: ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಈ
ಹಿಂದೆ ವಿಧಾನಸಭೆ ಪ್ರತಿನಿಧಿಸಿದ್ದ ಹಾಗೂ ಅವರ ಪುತ್ರ ಪ್ರಿಯಾಂಕ್‌ ಖರ್ಗೆ ಪ್ರತಿನಿಧಿಸುತ್ತಿರುವ ಚಿತ್ತಾಪುರ ಕ್ಷೇತ್ರದತ್ತ ಎಲ್ಲರ
ಚಿತ್ತ ಹರಿದಿದೆ. 2009 ಹಾಗೂ 2014ರಂತೆ ಚಿತ್ತಾಪುರ ಕ್ಷೇತ್ರದಲ್ಲಿ
ಕಾಂಗ್ರೆಸ್‌ಗೆ ಲೀಡ್‌ ಕೊಡುತ್ತದೆಯೋ ಇಲ್ಲವೋ ಎನ್ನುವ ವಿಷಯದತ್ತ ಎಲ್ಲರ ಚಿತ್ತ ನೆಟ್ಟ ಕಾರಣ ಕುತೂಹಲ ಮೂಡಿದೆ.

Advertisement

ಸಚಿವ ಪ್ರಿಯಾಂಕ್‌ ಖರ್ಗೆ ವಿರುದ್ಧ ಅಸಮಾಧಾನ, ಇಲ್ಲವೇ ಅಭಿವೃದ್ಧಿಪರ ಕಾರ್ಯದ ಅಭಿಮಾನ ಈ ಚುನಾವಣೆಯಲ್ಲಿ ಮೇಲುಗೈ ಆಗುತ್ತದೆಯೇ ಎನ್ನುವುದರತ್ತ ಚುನಾವಣೆ ಕೇಂದ್ರೀಕೃತವಾಗಿರುವುದು ಕ್ಷೇತ್ರದಲ್ಲಿ ಸುತ್ತು ಹಾಕಿದಾಗ ಕಂಡು ಬರುತ್ತಿದೆ. 2009ರಲ್ಲಿ ಚಿತ್ತಾಪುರ ಕ್ಷೇತ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆರು ಸಾವಿರ ಹಾಗೂ 2014ರಲ್ಲಿ 16239 ಮತಗಳು ಬಿಜೆಪಿಗಿಂತ ಹೆಚ್ಚು ಮತಗಳು ಬಂದಿದ್ದವು. ಈ ಬಾರಿ ಈ ಮತಗಳು ಕೈ ಹಿಡಿಯುವವೇ ಎನ್ನುವ ಚರ್ಚೆ ಶುರುವಾಗಿದೆ. ಉಸ್ತುವಾರಿ ಸಚಿವರು ಜನರನ್ನು ಸರಿಯಾಗಿ ಹಚ್ಚಿಕೊಳ್ಳುವುದಿಲ್ಲ ಎನ್ನುವ ಅಸಮಾಧಾನ ಹಾಗೂ ಸಚಿವರು ಜನೋಪಯೋಗಿ ಕಾರ್ಯ ಕೈಗೊಳ್ಳುತ್ತಾರೆ ಎನ್ನುವ ಅಭಿಮಾನ ಓರೆಗೆ ಹಚ್ಚುವ ಚುನಾವಣೆ ಇದಾಗಿದೆ ಎನ್ನಲಾಗುತ್ತಿದೆ.

ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಖರ್ಗೆ ಪುತ್ರ
ಪ್ರಿಯಾಂಕ್‌ ಖರ್ಗೆ ಅವರನ್ನು ಸೋಲಿಸಬೇಕೆಂಬ ಗುಂಪಿಗೆ
ಈಗ ಮಾಜಿ ಸಚಿವ ಬಾಬುರಾವ ಚಿಂಚನಸೂರ ಸೇರಿದ್ದಾರೆ. ಇದು
ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದು ಕ್ಷೇತ್ರದಲ್ಲಿನ ಪ್ರಮುಖ ವಿದ್ಯಮಾನ ಎಂದು ಹೇಳಬಹುದಾಗಿದೆ.

ಹಳ್ಳಿ ಕಟ್ಟೆಗಳಲ್ಲಿ ಮತದಾರರ
ಚರ್ಚೆ:
ಸಂಸದ ಡಾ| ಮಲ್ಲಿಕಾರ್ಜುನ ಖರ್ಗೆ ಹಾಗೂ ಬಿಜೆಪಿ ಅಭ್ಯರ್ಥಿ ಉಮೇಶ ಜಾಧವ ಚಿತ್ತಾಪುರ ಕ್ಷೇತ್ರದಲ್ಲಿ ಸಂಚರಿಸಿ ಮತಯಾಚಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಮತಯಾಚಿಸಿದ್ದರೆ ಕಾಂಗ್ರೆಸ್‌ದಿಂದ ದೊಡ್ಡ ನಾಯಕರ್ಯಾರು ಮತಬೇಟೆಗೆ ಇಳಿದಿಲ್ಲ. ಚಿತ್ತಾಪುರ, ವಾಡಿ ಪಟ್ಟಣ ಸೇರಿದಂತೆ ನಾಲವಾರ, ರಾವೂರ, ಸನ್ನತಿ, ಅಳ್ಳೊಳ್ಳಿ, ದಿಗ್ಗಾಂವ ವ್ಯಾಪ್ತಿಯ ಹಳ್ಳಿ ಕಟ್ಟೆಗಳಿಗೆ ಈಗ ಚುನಾವಣೆ ಜ್ವರ ಏರಿದೆ. ಯಾರಿಗೆ ಮತ ನೀಡಬೇಕು ಎನ್ನುವ ಚರ್ಚೆ ಗೆರಿಗೆದರುತ್ತಿದ್ದಂತೆ ರಾಜಕೀಯ ನಾಯಕರುಗಳು ಪ್ರತಿ ಗ್ರಾಮಗಳಲ್ಲೂ ಆಂತರಿಕವಾಗಿ ಜಾತಿ ಸಭೆಗಳನ್ನು ಆಯೋಜಿಸಿ ಗುಪ್ತವಾಗಿ ಮತಬೇಟೆ ನಡೆಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ.
ಬಿಜೆಪಿ ಬಹಿರಂಗ ಪ್ರಚಾರಕ್ಕೆ ಹೆಚ್ಚಿನ ಮಹತ್ವ ನೀಡಿದ್ದರೆ, ಕಾಂಗ್ರೆಸ್‌ ಆಂತರಿಕ ಪ್ರಚಾರ ಕೈಗೊಂಡು ಮತ ಕ್ರೂಢೀಕರಣ ಮಾಡುತ್ತಿದೆ.

Advertisement

ಗೊಂದಲದಲ್ಲಿ ಮತದಾರ: ಸ್ಥಳೀಯವಾಗಿ ನೋಡಿದರೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಬೆಂಬಲಿಸುವುದು ಒಳಿತಾಗಿದೆ. ಆದರೆ ದೇಶದ ಹಿತದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸುವುದು ಹೆಚ್ಚು ಸಮಂಜಸ ಎನ್ನುವುದಾಗಿ ಮತದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಅವರು ಬಂದ ನಂತರ ರಸ್ತೆಗಳು ಅಭಿವೃದ್ಧಿಯಾಗಿವೆ. ಯಾದಗಿರಿ-ಕಲಬುರಗಿ ರಾಷ್ಟ್ರೀಯ ಹೆದ್ದಾರಿಯಾಗಿ ಬಸ್‌ ಸಂಚಾರ ಸರಳವಾಗಿದೆ. ಬಹುತೇಕ ಗ್ರಾಮಗಳಿಗೆ ಡಾಂಬರ್‌ ರಸ್ತೆಗಳಾಗಿವೆ. ಶಿಕ್ಷಣ ವಲಯ, ಪ್ರಗತಿ ಕಾಲೋನಿ ಯೋಜನೆ ಜನರ ಮನಗೆದ್ದಿವೆ. ಈಗ ಜಿಲ್ಲೆ ಹಿಂದಿನಂತಿಲ್ಲ. ಸಾಕಷ್ಟು ಬದಲಾಗಿದೆ. ಇದೆಲ್ಲ ನೋಡಿದರೆ ನಾವು ಖರ್ಗೆ ಅವರನ್ನೇ ಬೆಂಬಲಿಸುವುದು ಸಮಂಜಸವೆನಿಸುತ್ತಿದೆ ಎನ್ನುವ ವರ್ಗ ಒಂದೆಡೆಯಾದರೇ, ದೇಶದ ಭದ್ರತೆಗಾಗಿ ದಿಟ್ಟ ನಿರ್ಧಾರ ಕೈಗೊಳ್ಳುವ ತಾಕತ್ತು ನರೇಂದ್ರ ಮೋದಿಗೆ ಮಾತ್ರವಿದೆ ಎನ್ನುವ ವರ್ಗ ಇನ್ನೊಂದು. ಹೀಗಾಗಿ ಮತದಾರ ಗೊಂದಲದಲ್ಲಿದ್ದು, ಧರ್ಮ ಸಂಕಟದಲ್ಲಿ ಸಿಲುಕಿದ್ದಾನೆ.

ಯಾರ ಕೈ ಮೇಲುಗೈ
ಸಂಸದ ಖರ್ಗೆ ವಿರುದ್ಧ ತೊಡೆತಟ್ಟಿರುವವರ
ಕೈ ಮೇಲುಗೈ ಆಗುತ್ತದೆಯೋ ಇಲ್ಲ ಸಂಸದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಚಿವ ಪ್ರಿಯಾಂಕ್‌ ಖರ್ಗೆ ಮೇಲುಗೈ ಆಗುತ್ತದೆಯೋ ಎನ್ನುವುದು ಪ್ರಸ್ತುತ ಚುನಾವಣೆಯಲ್ಲಿನ ಮುಖ್ಯಾಂಶವಾಗಿದೆ. ಒಟ್ಟಾರೆ ಚಿತ್ತಾಪುರದಿಂದ ಬರುವ ಮತ ಇಡೀ ಕ್ಷೇತ್ರದ ಕೇಂದ್ರಬಿಂದು ಎನ್ನುವಂತೆ ವಾತಾವರಣ ನಿರ್ಮಾಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next