ಗದಗ: ಸ್ಥಳೀಯ ಗದಗ ನ್ಪೋರ್ಟ್ಸ್ ಆಂಡ್ ಕಲ್ಚರಲ್ ಅಕಾಡೆಮಿ ನೇತೃತ್ವದಲ್ಲಿ ಡಿಸೆಂಬರ್ ಕೊನೆ ವಾರ ಅಥವಾ ಜನವರಿ ಎರಡನೇ ವಾರದಲ್ಲಿ ನಗರದಲ್ಲಿ ಸಾಹಿತ್ಯ ಸಮ್ಮೇಳನ ಮಾದರಿಯಲ್ಲಿ “ಕನ್ನಡ ಸಾಹಿತ್ಯ ಸಿಂಚನ’ ಹಮ್ಮಿಕೊಳ್ಳಲಾಗಿದೆ ಎಂದು ಸಾಹಿತಿ ಐ.ಕೆ. ಕಮ್ಮಾರ ಹೇಳಿದರು.
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಭೂಮರಡ್ಡಿ ವೃತ್ತದ ಸಮೀಪದ ಹಳೆ ವಖಾರ ಸಾಲು ಇದ್ದ ಬಯಲು ಪ್ರದೇಶದಲ್ಲಿ ಮುಖ್ಯ ವೇದಿಕೆ ಜತೆ ಆರು ಸಮಾನಾಂತರ ವೇದಿಕೆ ನಿರ್ಮಿಸಲಾಗುತ್ತಿದೆ. ವೇದಿಕೆಗಳಿಗೆ ಶ್ರೀ ವೀರನಾರಾಯಣ, ಲಿಂ.ಪಂ.ಪುಟ್ಟರಾಜ ಕವಿ ಗವಾಯಿಗಳವರು, ಲಿಂ.ಜ. ಡಾ.ತೋಂದ ಸಿದ್ಧಲಿಂಗ ಶ್ರೀಗಳು ಹೀಗೆ ಹಲವು ಹೆಸರು ಇಡಲಾಗುತ್ತಿದೆ. ಈ ವೇದಿಕೆಗಳಲ್ಲಿ ಕವಿಗೋಷ್ಠಿ, ಮಹಿಳಾಗೋಷ್ಠಿ, ಯುವಗೋಷ್ಠಿ ಇರಲಿವೆ. “ಕನ್ನಡ ಸಾಹಿತ್ಯ ಸಿಂಚನ’ದಲ್ಲಿ ಜನಪದ ಸಾಹಿತ್ಯ, ದಾಸ ಸಾಹಿತ್ಯ, ಚುಟುಕು ಹೀಗೆ ವಿವಿಧ ಪ್ರಕಾರದ ಸಾಹಿತ್ಯ ಸಹ ಇರಲಿದೆ ಎಂದರು.
ಮೂರು ದಿನಗಳ ಕಾಲ ನಡೆಯುವ ಈ ಕನ್ನಡ ಸಾಹಿತ್ಯ ಸಿಂಚನಕ್ಕೆ ಪಂ. ರಾಜಗುರು ಗುರುಸ್ವಾಮಿ ಕಲಕೇರಿ ಅವರು ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಸಾಹಿತ್ಯ ಸಿಂಚನ ಕಾರ್ಯಕ್ರಮವು ಅನಿಲ ಮೆಣಸಿನಕಾಯಿ ಅವರ ನೇತೃತ್ವದಲ್ಲಿ ನಡೆಯುತ್ತಿದೆಯಾದರೂ ಅದಕ್ಕೆ ರಾಜಕೀಯ ಬಣ್ಣ ಬೇಡ. ಇದು ಪಕ್ಷ, ಜಾತಿ ರಾಜಕೀಯ ಮೀರಿ ಸಾಹಿತ್ಯ ಕಾರ್ಯಕ್ರಮವಷ್ಟೇ ಆಗಿರಲಿದೆ ಎಂದು ಸ್ಪಷ್ಟಪಡಿಸಿದರು.
ಗದಗ ನಗರಕ್ಕೆ ಮುದ್ರಣ ಕಾಶಿ ಎಂಬ ಹೆಗ್ಗಳಿಕೆ ಇರುವುದರಿಂದ ಪುಸ್ತಕೋತ್ಸವ ಸಹ ಇರಲಿದೆ. ಅಂದಾಜು ಇಪ್ಪತ್ತು ಮಳಿಗೆಗಳಲ್ಲಿ ಪುಸ್ತಕ ಪ್ರದರ್ಶನ ಇರಲಿದೆ. ಈಗಾಗಲೆ ಹಲವು ಪ್ರಕಾಶಕರು ಮಳಿಗೆ ಹಾಕಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.
ನಿವೃತ್ತ ಪ್ರಾಚಾರ್ಯ ಕವಿತಾ ಕಾಶಪ್ಪನವರ ಮಾತನಾಡಿ, ಇದೊಂದು ಸಾಹಿತ್ಯಿಕ ಕಾರ್ಯಕ್ರಮ ಆಗಿದ್ದರಿಂದ ರಾಜಕೀಯ ದೂರ ಇರಲಿದೆ. ಪಕ್ಷಾತೀತ ಆಗಿರಲಿದೆ. ಈ ಕಾರ್ಯಕ್ರಮಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜೋಗತಿ ಮಂಜಮ್ಮ ಕೂಡ ಆಗಮಿಸಲಿದ್ದಾರೆ. ಅಲ್ಲದೇ, ಎಲೆ ಮರೆಯ ಕಾಯಿಯಂತಿರುವ, ಗುರುತಿಸದೇ ಇರುವ ಸಾಹಿತಿಗಳಿಗೆ ಈ ಕನ್ನಡ ಸಾಹಿತ್ಯ ಸಿಂಚನ ಕಾರ್ಯಕ್ರಮ ವೇದಿಕೆ ಒದಗಿಸಲಿದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗದಗ ತಾಲೂಕು ಅಧ್ಯಕ್ಷೆ ಡಾ. ರಶ್ಮಿ ಅಂಗಡಿ, ವಿ.ಬಿ. ಹಿರೇಮಠ ಪ್ರತಿಷ್ಠಾನದ ಅಧ್ಯಕ್ಷೆ ವಿ.ವಿ. ಹಿರೇಮಠ, ಸಾಹಿತಿಗಳಾದ ಮಲ್ಲಿಕಾರ್ಜುನ ಪೂಜಾರ, ಮಂಜುನಾಥ ಡೋಣಿ ಸೇರಿ ಹಲವರು ಇದ್ದರು.