Advertisement

ಅವಧಿಗಿಂತ ಮೊದಲೇ ಅರಳಲಿದೆ ಹೆಮ್ಮಾಡಿ ಸೇವಂತಿಗೆ

08:28 AM Dec 04, 2022 | Team Udayavani |

ಹೆಮ್ಮಾಡಿ: ಮಾರಣಕಟ್ಟೆಯ ಬ್ರಹ್ಮಲಿಂಗೇಶ್ವರ ಪ್ರಿಯ, ಆಕರ್ಷಕ ಬಣ್ಣ, ಚಿಕ್ಕ ಗಾತ್ರ, ದೀರ್ಘ‌ ಬಾಳಿಕೆ, ಮೋಹಕ ಚೆಲುವಿನೊಂದಿಗೆ ತನ್ನದೇ ಆದ ಗುಣ ವೈಶಿಷ್ಟ್ಯಗಳನ್ನು ಹೊಂದಿರುವ ಹೂವೇ ಹೆಮ್ಮಾಡಿ ಸೇವಂತಿಗೆ. ಈ ಬಾರಿ ಮಾತ್ರ ನಿರಂತರ ಮಳೆ, ಈಗ ಚಳಿ, ಇನ್ನೂ ಮಳೆ ಬರುವ ಸಂಭವ ಇರುವುದರಿಂದ ನಿಗದಿತ ಅವಧಿಗಿಂತ ಒಂದೆರಡು ವಾರ ಮೊದಲೇ ಸೇವಂತಿಗೆ ಹೂವು ಅರಳುವ ಸಾಧ್ಯತೆಯಿದೆ.

Advertisement

ಹೆಮ್ಮಾಡಿ, ಕಟ್‌ಬೆಲೂ¤ರು, ಹರೇಗೋಡು, ರಾಜಾಡಿ ಸುತ್ತಮುತ್ತಲಿನ ಭಾಗಗಳ ರೈತರು ಸೆಪ್ಟಂಬರ್‌ನಿಂದ ಸೇವಂತಿಗೆ ಬೆಳೆಯನ್ನು ಬೆಳೆಯಲು ಆರಂಭಿಸುತ್ತಾರೆ. ಅದು ಉಡುಪಿ, ಮಂಗಳೂರು, ಕುಂದಾಪುರ, ಬೈಂದೂರು, ಭಟ್ಕಳ ಭಾಗದ ಜಾತ್ರೆ, ಕೆಂಡೋತ್ಸವಗಳಿಗೆ ಅನುಕೂಲವಾಗುವಂತೆ ಜನವರಿ ಮೊದಲ ವಾರದಲ್ಲಿ ಸೇವಂತಿಗೆ ಮಾರುಕಟ್ಟೆಗೆ ಬರುತ್ತದೆ. ಆದರೆ ಈ ಬಾರಿ ಮಾತ್ರ ಒಂದೆರಡು ವಾರ ಮೊದಲೇ ಅಂದರೆ ಡಿಸೆಂಬರ್‌ನಲ್ಲೇ ಹೂವು ಅರಳುವ ಸಂಭವವಿದೆ ಎನ್ನುತ್ತಾರೆ ಸೇವಂತಿಗೆ ಬೆಳೆಗಾರರು.

ಹೆಚ್ಚು ಬೆಳೆ
ಕಳೆದೆರಡು ವರ್ಷಗಳಿಂದ ಕೊರೊನಾ, ಲಾಕ್‌ಡೌನ್‌ ಕಾರಣಗಳಿಂದ ಅದ್ಧೂರಿ ಜಾತ್ರೆ, ಕೆಂಡೋತ್ಸವಗಳು ನಡೆಯದ ಕಾರಣ, ಹೂವಿಗೂ ಬೇಡಿಕೆ ಇದ್ದಿರಲಿಲ್ಲ. ಹಾಗಾಗಿ ಬಹುತೇಕ ಬೆಳೆಗಾರರು ಕಡಿಮೆ ಪ್ರಮಾಣದಲ್ಲಿ ಹೂವನ್ನು ಬೆಳೆದಿದ್ದರು. ಆದರೆ ಈ ಬಾರಿ ಹೆಮ್ಮಾಡಿ, ಕಟ್‌ಬೆಲೂ¤ರು ಗ್ರಾಮಗಳ ಸುಮಾರು 50-60 ಕ್ಕೂ ಹೆಚ್ಚು ಮಂದಿ ರೈತರು, ಅಂದಾಜು 50 ಕ್ಕೂ ಮಿಕ್ಕಿ ಎಕರೆ ಪ್ರದೇಶದಲ್ಲಿ ಹೆಚ್ಚು ಸೇವಂತಿಗೆ ಕೃಷಿಯನ್ನು ಮಾಡಿದ್ದಾರೆ. ಹಿಂದಿನೆರಡು ವರ್ಷಗಳಿಗಿಂತ ಈ ಸಲ ಹೆಚ್ಚು ಹೂವು ಮಾರುಕಟ್ಟೆಗೆ ಬರುವ ಸಾಧ್ಯತೆಗಳಿವೆ.

ಇನ್ನು ಮಳೆ ಬಂದರೆ ತೊಂದರೆ
ಈ ಬಾರಿ ಸೇವಂತಿಗೆ ಬೆಳೆಗೆ ಉತ್ತಮ ವಾತಾವರಣವಿದೆ. ಕೆಲ ವರ್ಷಗಳಲ್ಲಿ ಮೋಡ ಹೆಚ್ಚಿದ್ದರಿಂದ ಮೊಗ್ಗುಗಳು ಕರಟಿ ಹೋಗುತ್ತಿದ್ದವು. ಈ ಬಾರಿ ಚಳಿ, ಮಳೆ ಕಾಲ-ಕಾಲಕ್ಕೆ ಬಂದಿದ್ದರಿಂದ ಒಳ್ಳೆಯ ಹವಾಮಾನವಿತ್ತು. ಆದರೆ ಇನ್ನು ಮಳೆ ಬರ ಬಾರದು. ಬಂದರೆ ಬೆಳೆಗೆ ಕಷ್ಟವಾಗಲಿದೆ ಎನ್ನುವುದು ಸೇವಂತಿಗೆ ಬೆಳೆಗಾರ ರಾಜು ಅಭಿಪ್ರಾಯ.

ಬೇಗ ಹೂವು ಬಿಟ್ಟರೇನು ಕಷ್ಟ?
ಸೇವಂತಿಗೆ ಬೆಳೆಗಾರರು ಜ. 3 ರಿಂದ ಆರಂಭಗೊಂಡು ಮಕರ ಸಂಕ್ರಾಂತಿಯ ಮಾರಣಕಟ್ಟೆ ಹಬ್ಬ ಸಹಿತ ಈ ಭಾಗಗಳ ಸುತ್ತಮುತ್ತಲಿನ ಜಾತ್ರೆಗಳಿಗೆ ಲೆಕ್ಕಾಚಾರ ಹಾಕಿಯೇ ಬೆಳೆದಿರುತ್ತಾರೆ. ಆ ಹೂವು ಅವಧಿಗಿಂತ ಮೊದಲೇ ಅರಳಿದರೆ ಪ್ರಯೋಜನವಿರುವುದಿಲ್ಲ. ಇದರಿಂದ ಕೆಲವೊಂದು ಜಾತ್ರೆ, ಕೆಂಡೋತ್ಸವಗಳಿಗೆ ಬೇಡಿಕೆಯಷ್ಟು ಹೂವು ಸಿಗದಿರಬಹುದು ಎನ್ನುವ ಆತಂಕ ಬೆಳೆಗಾರರದ್ದಾಗಿದೆ.

Advertisement

ಕಾರಣವೇನು?
ಸಾಮಾನ್ಯವಾಗಿ ಸೇವಂತಿಗೆ ಬೆಳೆ ಆಗಸ್ಟ್‌, ಸೆಪ್ಟಂಬರ್‌ನಿಂದ ಆರಂಭಿಸಿ, ಜನವರಿವರೆಗೆ 4 ತಿಂಗಳ ಅವಧಿಯಾಗಿರುತ್ತದೆ. ಜನವರಿಯಿಂದ ಹೂವು ಕೊಯ್ಯಲು ಆರಂಭಿಸಿ, ಮಾರ್ಚ್‌ ವರೆಗೆ ನಿರಂತರ ಸೇವಂತಿಗೆ ಸುಗ್ಗಿ ಇರುತ್ತದೆ. ಇದು ಹೆಚ್ಚಾಗಿ ಇಬ್ಬನಿಯಲ್ಲೇ ಬೆಳೆಯುವ ಬೆಳೆಯಾಗಿದ್ದು, ಆದರೆ ಈ ಬಾರಿ ಆರಂಭದಲ್ಲಿ ಒಳ್ಳೆಯ ಮಳೆ ಬಂದಿದೆ. ಆ ಬಳಿಕವೂ ಆಗಾಗ್ಗೆ ನಿರಂತರ ಮಳೆ ಬರುತ್ತಿದ್ದುದರಿಂದ ಗಿಡಗಳು ಬೇಗ ಬೆಳೆಯಲು ಸಾಧ್ಯವಾಯಿತು. ಒಳ್ಳೆಯ ಗೊಬ್ಬರವೂ ಸಿಕ್ಕಿದ್ದರಿಂದ ಉತ್ತಮ ರೀತಿಯಲ್ಲಿ ಬೆಳೆದು ನಿಂತಿದೆ. ಇನ್ನು ಮಳೆ ಬಂದರೆ ಈಗಿರುವ ಮೊಗ್ಗುಗಳು ಆದಷ್ಟು ಬೇಗ ಅರಳಬಹುದು.
– ಸಂತೋಷ್‌ ಭಂಡಾರಿ ಹೆಮ್ಮಾಡಿ, ಸೇವಂತಿಗೆ ಬೆಳೆಗಾರ

– ಪ್ರಶಾಂತ್ ಪಾದೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next